ವಿಜಯ್ ಸೇತುಪತಿ, ದಕ್ಷಿಣ ಚಿತ್ರರಂಗದ ಜನಪ್ರಿಯ ನಟರಲ್ಲೊಬ್ಬರು. ಉತ್ತರದಲ್ಲೂ ಹೆಸರು ಮಾಡಿದ್ದಾರೆ. ಕೊಟ್ಟ ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಎಂಬುದು ಈ ನಟನಿಗೆ ಬಹಳ ಚೆನ್ನಾಗಿಯೇ ತಿಳಿದಿದೆ. ತೆರೆ ಮೇಲೆ ಅವರಿಗಿನ್ನ ಅವರ ಪಾತ್ರಗಳೇ ಸದ್ದು ಮಾಡುತ್ತದೆ. ಅಷ್ಟರ ಮಟ್ಟಿಗೆ ಅಭಿನಯವನ್ನು ಕರಗತ ಮಾಡಿಕೊಂಡಿದ್ದಾರೆ ಅಂತಾರೆ ಅಭಿಮಾನಿಗಳು.
ಒಂದೆಡೆ ನಾಯಕನಾಗಿ ನಟಿಸುತ್ತಿದ್ದರೆ, ಮತ್ತೊಂದೆಡೆ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನೂ ನಿರ್ವಹಿಸುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಹೀಗೇ ಯಾವುದೇ ಭಾಷೆಯಾದರೂ ತಮ್ಮ ಅಮೋಘ ಅಭಿನಯದಿಂದ ಗೆದ್ದು ಬರುತ್ತಾರೆ. ಸದ್ಯ ನಾಯಕನಾಗಿ ನಟಿಸಿರುವ 'ಮಹಾರಾಜ' ಸಿನಿಮಾ ಸಲುವಾಗಿ ಸಖತ್ ಸದ್ದು ಮಾಡುತ್ತಿದೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ಈ ಚಿತ್ರ ನಾಳೆ ಸಿನಿಪ್ರಿಯರಿಗೆ ದರ್ಶನ ಕೊಡಲಿದೆ. ಈ ಸಂದರ್ಭ ವಿಜಯ್ ಸೇತುಪತಿ ಈಟಿವಿ ಭಾರತ ಜೊತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
50ನೇ ಚಿತ್ರಕ್ಕೆ ನಿರ್ದಿಷ್ಟ ಕಥೆ? 'ಮಹಾರಾಜ' ನನ್ನ 50ನೇ ಚಿತ್ರ. ಹಾಗಾಗಿ ವಿಶೇಷವಾಗಿ ಗಮನ ಹರಿಸಿ ಆಯ್ಕೆ ಮಾಡಿದ ಕಥೆಯಾಗಿದೆ. ಸ್ಟೋರಿ ಕೇಳಿದಾಗ ಬಹಳ ಆಸಕ್ತಿಕರ ಎನಿಸಿತು. ಕಥೆಗಿಂತ ನಿರೂಪಣೆ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಇದು ನನಗೆ ಪಿಜ್ಜಾ ಸಿನಿಮಾ ನೆನಪಿಸುತ್ತದೆ. ಅದರಲ್ಲೂ ಹಲವು ಸ್ವಾರಸ್ಯಕರ ತಿರುವುಗಳಿವೆ. ನಿರ್ದೇಶಕರು ಕಥೆ ಹೇಳಿದ ತಕ್ಷಣ ಇದು, ನನ್ನ 50ನೇ ಚಿತ್ರ ಎಂದು ಘೋಷಿಸಿದೆವು ಎಂದು ತಿಳಿಸಿದರು.
ಈ ಪಯಣವನ್ನು ಹಿಂತಿರುಗಿ ನೋಡಿದಾಗ ಹೇಗನಿಸುತ್ತದೆ? ನನ್ನ ಚಿತ್ರಗಳ ಸಂಖ್ಯೆ ಕೇವಲ 50 ಆಗಿರಬಹುದು. ಆದರೆ, ನಾನು 500ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ಅನೇಕ ಜನರನ್ನು ಭೇಟಿಯಾದೆ. ಸೋಲು - ಗೆಲುವುಗಳನ್ನು ಕಂಡಿದ್ದೇನೆ. ಸಿನಿಮಾದ ರಿಸಲ್ಟ್ ನಂತರ ಏನಾಯಿತು ಎಂಬುದರ ಕುರಿತು ನಾವು ಯೋಚಿಸುತ್ತೇವೆ. ಸಾಕಷ್ಟು ಅನುಭವಗಳಾಗಿದೆ. ಅದೊಂದು ದೊಡ್ಡ ಪ್ರಯಾಣ ಎಂದು ವರ್ಣಿಸಿದರು.