ನ್ಯಾಶನಲ್ ಕ್ರಶ್ ಖ್ಯಾತಿಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬ ಆಚರಿಸಲು ಸಿದ್ಧರಾಗಿದ್ದಾರೆ. ನಟಿಯ ಜನ್ಮದಿನದಂದು ಮುಂದಿನ ಬಹುನಿರೀಕ್ಷಿತ ಚಿತ್ರಗಳ ಅಪ್ಡೇಟ್ಸ್ ಸಿಗುವ ಸಾಧ್ಯತೆಗಳಿದ್ದು, ಸಿನಿಪ್ರಿಯರು ಹಾಗೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಶುಕ್ರವಾರ ತಮ್ಮ 28ನೇ ಜನ್ಮದಿನ ಆಚರಿಸಲು ಸಜ್ಜಾಗಿರುವ ಕಿರಿಕ್ ಪಾರ್ಟಿ ಬೆಡಗಿ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನಟಿಯ ಪ್ರಯಾಣವನ್ನು ಸೆರೆಹಿಡಿದಿದೆ. ಆದ್ರೆ ಎಲ್ಲಿಗೆ ತೆರಳುತ್ತಿದ್ದಾರೆಂಬುದನ್ನು ಬಹಿರಂಗಪಡಿಸಿಲ್ಲ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ಕಿರು ವಿಡಿಯೋ ಹಂಚಿಕೊಂಡ ರಶ್ಮಿಕಾ ಅದಕ್ಕೆ ಬಿಳಿ ಹೃದಯದ ಎಮೋಜಿ ಹಾಕಿದ್ದಾರೆ. "ಇದು ನನ್ನ ಜನ್ಮದಿನದ ವಾರ" ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಮರುಭೂಮಿಯಂತೆ ತೋರಿದ್ದು, ಎಲ್ಲಿಗೆ ತೆರೆಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಎಂದಿನಂತೆ ಈ ವರ್ಷವೂ ರಶ್ಮಿಕಾ ಮಂದಣ್ಣ ಅವರ ಜನ್ಮದಿನ ವಿಶೇಷವಾಗಿರಲಿದೆ. ರಶ್ಮಿಕಾ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ದಿ ಗರ್ಲ್‌ಫ್ರೆಂಡ್'ನ ಟೀಸರ್ ಏಪ್ರಿಲ್ 5 ರಂದು ಅನಾವರಣಗೊಳ್ಳಲಿದೆ. ರಶ್ಮಿಕಾ ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಟೀಸರ್‌ಗಾಗಿ ಡಬ್ ಮಾಡಿದ್ದಾರೆ.
ಕುತೂಹಲದ ವಿಚಾರವೆಂದರೆ, ರಶ್ಮಿಕಾ ಮಂದಣ್ಣ ಅವರ ವದಂತಿಯ ಗೆಳೆಯ ವಿಜಯ್ ದೇವರಕೊಂಡ ಅವರ ಮುಂಂದಿನ ಬಹುನಿರೀಕ್ಷಿತ ಚಿತ್ರ 'ಫ್ಯಾಮಿಲಿ ಸ್ಟಾರ್' ಅನ್ನೂ ಕೂಡ ನಟಿಯ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ 'ಫ್ಯಾಮಿಲಿ ಸ್ಟಾರ್' ಪ್ರಮೋಶನಲ್ ಈವೆಂಟ್ನಲ್ಲಿ ಭಾಗವಹಿಸಿದ್ದ ಸಂದರ್ಭ, ಈ ದಿನಾಂಕದ ಆಯ್ಕೆಯ ಬಗ್ಗೆ ವಿಜಯ್ ಅವರಲ್ಲಿ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟ, ಹಾಲಿಡೇ ಸೀಸನ್, ಅದಕ್ಕೆ ಹೊಂದಿಕೆಯಾಗುತ್ತದೆ ಎಂದು ತಿಳಿಸಿದರು. ರಶ್ಮಿಕಾ ಜನ್ಮದಿನದ ಬಗ್ಗೆ ಗಮನಸೆಳೆದಾಗ, "ಹೌದು, ರಶ್ಮಿಕಾರ ಹುಟ್ಟುಹಬ್ಬ. ಇದು ನಮಗೆ ಅದೃಷ್ಟ ತರಬಹುದು ಎಂದು ನಾನು ಭಾವಿಸುತ್ತೇನೆ" ಎಂದು ವಿಜಯ್ ತಿಳಿಸಿದರು. ನಟನ ಈ ಹೇಳಿಕೆಯು ಅವರ ಸಂಬಂಧದ ಸುತ್ತಲಿನ ಊಹಾಪೋಹಗಳಿಗೆ ತುಪ್ಪ ಸುರಿದಂತಿತ್ತು.