'ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ಪ್ರಭಾಸ್ ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ.
ಈ ಐದನೇ ಸೂಪರ್ ಸ್ಟಾರ್ ಯಾರು ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯೂಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವಿಡಿಯೋ ಬಿಡುಗಡೆ ಮಾಡಲಾಗಿದೆ.
From Skratch: Building A Superstar ಹೆಸರಿನ ಈ ವಿಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಟಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್ ನೀಡಲಾಗಿದ್ದು, ಈ ಐದನೇ ಸೂಪರ್ ಸ್ಟಾರ್ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರ ವರೆಗೂ ಕಾಯಬೇಕು.