ಚೆನ್ನೈ (ತಮಿಳುನಾಡು): ತಮಿಳು ಚಿತ್ರರಂಗದ ಬಹುಬೇಡಿಕೆ ನಟ ಚಿಯಾನ್ ವಿಕ್ರಮ್ ಮುಖ್ಯಭೂಮಿಕೆಯ 'ತಂಗಲಾನ್' ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ. ಪಾ ರಂಜಿತ್ ನಿರ್ದೇಶನದ ಆ್ಯಕ್ಷನ್ ಡ್ರಾಮಾ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದ್ದು, ಚಿತ್ರತಂಡ ಯಶಸ್ಸಿನಲೆಯಲ್ಲಿ ತೇಲುತ್ತಿದೆ. ಸದ್ಯ ಸಂಪೂರ್ಣ ಚಿತ್ರತಂಡ ಒಂದೆಡೆ ಸೇರಿ ಸಿನಿಮಾ ಸಕ್ಸಸ್ನ ಸಂಭ್ರಮಾಚರಿಸಿದೆ.
ಚಿತ್ರತಂಡದವರಿಗೆ ಊಟ ಬಡಿಸಿದ ಚಿಯಾನ್ ವಿಕ್ರಮ್: ಸ್ಟಾರ್ ನಿರ್ದೇಶಕ - ನಟ ಕಾಂಬಿನೇಶನ್ನ ತಂಗಲಾನ್ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ತೆರೆಗಪ್ಪಳಿಸಿತ್ತು. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಸ್ವೀಕರಿಸಿ ಬಾಕ್ಸ್ ಆಫೀಸ್ನಲ್ಲಿಯೂ ಕಮಾಲ್ ಮಾಡಿದೆ. ಈಗಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈ ಹಿನ್ನೆಲೆ ವಿಕ್ರಮ್ ಅವರು ತಂಗಲಾನ್ ಚಿತ್ರತಂಡಕ್ಕೆ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಸಾಂಪ್ರದಾಯಿಕ ಸಮಾರಂಭದಲ್ಲಿ ಸ್ವತಃ ನಾಯಕ ನಟ ಚಿಯಾನ್ ವಿಕ್ರಮ್ ಚಿತ್ರತಂಡದವರಿಗೆ ಊಟ ಬಡಿಸೋ ಮೂಲಕ ಗಮನ ಸೆಳೆದಿದ್ದಾರೆ.
100 ಕೋಟಿ ರೂ.ನ ಕ್ಲಬ್ ಸೇರುವ ವಿಶ್ವಾಸ: 'ತಂಗಲಾನ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಈವರೆಗೆ 70 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಚಿತ್ರ ಶೀಘ್ರದಲ್ಲೇ 100 ಕೋಟಿ ರೂ.ನ ಕ್ಲಬ್ ಸೇರುವ ವಿಶ್ವಾಸವಿದೆ. ವಿಕ್ರಮ್ ಪಾತ್ರ ಮತ್ತು ಅವರ ನಟನಾ ಸಾಮರ್ಥ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಳವಿಕಾ ಮೋಹನನ್ ಮತ್ತು ಪಾರ್ವತಿ ಕೂಡ ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಸ್ವೀಕರಿಸಿದ್ದಾರೆ. ಜಿ.ವಿ ಪ್ರಕಾಶ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.