ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಸಹಜ ಸುಂದರಿ ಸಾಯಿ ಪಲ್ಲವಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನ್ಯಾಚುರಲ್ ಬ್ಯೂಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರವಾದ 'ತಂಡೆಲ್' ತಂಡ ಸ್ಪೆಷಲ್ ವಿಡಿಯೋ ಅನಾವರಣಗೊಳಿಸಿ ನಟಿಗೆ ವಿಶೇಷವಾಗಿ ಶುಭ ಕೋರಿದೆ.
ಚಂದು ಮೊಂಡೇಟಿ ನಿರ್ದೇಶನದ ತಂಡೆಲ್ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ರಾಷ್ಟ್ರೀಯತೆಯಂತಹ ಅಂಶಗಳೊಂದಿಗೆ, ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯನ್ನೂ ಹೇಳಲಿದೆ. ನಾಗ ಸಾಯಿ ಪ್ರೇಮ್ಕಹಾನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ತಂಡೆಲ್ ಚಿತ್ರತಂಡ ಶೇರ್ ಮಾಡಿರುವ ಹೃದಯಸ್ಪರ್ಶಿ ವಿಡಿಯೋ, ಬರ್ತ್ ಡೇ ಗರ್ಲ್ನ ಹಿಂದಿನ ಪಾತ್ರಗಳನ್ನು, ನಟಿಯಾಗಿ ಅವರ ವೃತ್ತಿಜೀವನ ಪ್ರಯಾಣವನ್ನು ಪ್ರದರ್ಶಿಸಿದೆ. ನಂತರ ನಾಗ ಚೈತನ್ಯ ಜೊತೆಗಿನ ಪ್ರಸ್ತುತ ಚಿತ್ರಕ್ಕೆ ಎಂಟ್ರಿ ಕೊಡುತ್ತದೆ. ತೆರೆಮರೆ ದೃಶ್ಯಾವಳಿಗಳು ಸೆಟ್‌ನಲ್ಲಿನ ಸಾಯಿ ಪಲ್ಲವಿ ಅವರ ನಗು, ಅಳು, ಮೋಜು-ಮಸ್ತಿಯಂತಹ ಕ್ಷಣಗಳನ್ನು ತೋರಿಸುತ್ತದೆ. ವಿಡಿಯೋ ನಟಿಮಣಿಯ ಶೂಟಿಂಗ್ ವೇಳೆಯ ಫನ್ನಿ ಮಿಸ್ಟೇಕ್ಸ್ (bloopers) ಅನ್ನೂ ಸಹ ಒಳಗೊಂಡಿದೆ. ನಟಿ ಅಭಿಮಾನಿಗಳನ್ನು ಅಪ್ಪಿಕೊಳ್ಳುವ ಮತ್ತು ಸೆಟ್‌ನಲ್ಲಿನ ಭಾವನಾತ್ಮಕ ಕ್ಷಣಗಳನ್ನು ಈ ವಿಡಿಯೋ ಒಳಗೊಂಡಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ವಿಡಿಯೋ ಹಂಚಿಕೊಂಡ ಚಿತ್ರತಂಡ, ''ಅಭಿನಯ ನಿಮ್ಮದು, ಆಚರಣೆ ನಮ್ಮದು. ನೀವು ನಿರ್ವಹಿಸಿ, ನಾವು ಗೌರವಿಸುತ್ತೇವೆ. ಹ್ಯಾಪಿ ಬರ್ತ್ ಡೇ 'ಬುಜ್ಜಿ ತಲ್ಲಿ'. ನಿಮ್ಮ ಈ ವಿಶೇಷ ದಿನದಂದು ನಮ್ಮ ತಂಡದ ವಿಶೇಷ ಉಡುಗೊರೆ ಇಲ್ಲಿದೆ'' ಎಂದು ಬರೆದುಕೊಂಡಿದೆ.