ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ರವಿತೇಜ ಅವರು ತಮ್ಮ ಮುಂದಿನ ಸಿನಿಮಾ ಸೆಟ್‌ನಲ್ಲಿದ್ದ ಸಂದರ್ಭ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದರು. ನೋವಿನ ಹೊರತಾಗಿಯೂ ಚಿತ್ರೀಕರಣವನ್ನು ಮುಂದುವರೆಸಿದ ಪರಿಣಾಮ ಅವರ ಸ್ಥಿತಿ ಹದಗೆಟ್ಟಿತು. ಈ ಬೆನ್ನಲ್ಲೇ ಹೈದರಾಬಾದ್ನ ಯಶೋದಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಪಡೆದಿದ್ದು, ಸಂಪೂರ್ಣ ಚೇತರಿಕೆಗಾಗಿ ಆರು ವಾರಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
ಅಧಿಕೃತ ಹೇಳಿಕೆಯಲ್ಲೇನಿದೆ?ನಟನ ವಕ್ತಾರರು ಈ ವಿಚಾರವನ್ನು ದೃಢಪಡಿಸಿದ್ದಾರೆ. ಮುಂದಿನ ಆರು ವಾರಗಳವರೆಗೆ ರವಿ ತೇಜ ತಮ್ಮ ಕೆಲಸದಿಂದ ದೂರವಿರಲಿದ್ದಾರೆ ಎಂಬುದನ್ನು ತಿಳಿಸಿದರು. ಶುಕ್ರವಾರ ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ, "ಇತ್ತೀಚೆಗೆ 'RT75' ಶೂಟಿಂಗ್ ಸಂದರ್ಭ ಮಾಸ್ ಮಹಾರಾಜ ರವಿತೇಜ ಅವರು ಬಲಗೈನ ಸ್ನಾಯು ನೋವಿಗೊಳಗಾದರು (muscle tear in his right hand). ಗಾಯದ ಹೊರತಾಗಿಯೂ, ಅವರು ಚಿತ್ರೀಕರಣ ಮುಂದುವರೆಸಿದರು. ದುರಾದೃಷ್ಟವಶಾತ್ ನೋವು ಉಲ್ಬಣಗೊಂಡಿತು. ಹಾಗಾಗಿ, ಗುರುವಾರ ಯಶೋದಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದರು. ಅವರ ಸಂಪೂರ್ಣ ಚೇತರಿಕೆಗಾಗಿ ವೈದ್ಯರು ಆರು ವಾರಗಳ ಬೆಡ್ ರೆಸ್ಟ್ಗೆ ಸೂಚಿಸಿದ್ದಾರೆ'' ಎಂದು ತಿಳಿಸಲಾಗಿದೆ.
ನಟ ಶೀಘ್ರ ಚೇತರಿಕೆಗೆ ಹಾರೈಕೆ: ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೆಚ್ಚಿನ ನಟನ ನೋವಿನ ವಿಚಾರ ತಿಳಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಹರಿದಾಡುತ್ತಿವೆ.