ಚೆನ್ನೈ, ತಮಿಳುನಾಡು:ಚೆನ್ನೈ, ತಮಿಳುನಾಡು: ದೇಶದಲ್ಲಿ 21 ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ತಮಿಳುನಾಡಿನಲ್ಲಿ ನಟರಾದ ಸೂಪರ್‌ಸ್ಟಾರ್ ರಜನಿಕಾಂತ್, ಧನುಷ್, ಅಜಿತ್, ವಿಜಯ್ ಸೇತುಪತಿ, ಕಮಲ್ ಹಾಸನ್ ಹಾಗೇ ಸದ್ಗುರು ಜಗ್ಗಿ ವಾಸುದೇವ್ ಮತ ಚಲಾಯಿಸಿ ತಮ್ಮ ಅಭಿಮಾನಿಗಳಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.
ನಟರು ಚೆನ್ನೈನ ತಮ್ಮ ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ದೇಶದ ಸಾಮಾನ್ಯ ಪ್ರಜೆಯಾಗಿ ತಮ್ಮ ನಾಗರಿಕ ಕರ್ತವ್ಯ ನಿರ್ವಹಿಸಿದ್ದಾರೆ. ನಟ ರಜಿನಿಕಾಂತ್ ಮತದಾನ ಮಾಡಲು ಬೆಳಗ್ಗೆಯೇ ಚೆನ್ನೈನ ಪೋಯಸ್ ಗಾರ್ಡನ್ ಮತಗಟ್ಟೆಗೆ ಆಗಮಿಸಿದರು. ವೋಟಿಂಗ್ ಬಳಿಕ ತಮ್ಮ ಶಾಯಿ ಬೆರಳನ್ನು ತೋರಿಸಿ ಮತದಾನಕ್ಕೆ ಕರೆ ನೀಡಿದರು. ತಲೈವಾ ಮತ ಚಲಾಯಿಸುತ್ತಿರುವ ವಿಡಿಯೋ ವೈರಲಾಗುತ್ತಿದೆ. ಅವರು ಮತಗಟ್ಟೆಗೆ ಬಂದೊಡನೆ ಅಭಿಮಾನಿಗಳ ದಂಡೇ ಸುತ್ತುವರೆಯಿತು. ಬಿಳಿ ಉಡುಪಲ್ಲಿ ಆಗಮಿಸಿದ ರಜನೀಕಾಂತ್ ಮತದಾನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. "ಮತದಾನ ಮಾಡುವುದು ನಾಗರಿಕರ ಹಕ್ಕಾಗಿದ್ದು, ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದರು.
ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ತಿರುವನ್ಮಿಯೂರ್ ಮತಗಟ್ಟೆಗೆ 6:40 ಕ್ಕೆ ಮತಗಟ್ಟೆಗೆ ಆಗಮಿಸಿ 7 ಗಂಟೆವರೆಗೆ ಕಾದು ಮತ ಚಲಾಯಿಸಿದರು. ನಟ ಧನುಷ್ ಕೂಡ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯ ಟಿಟಿಕೆ ರಸ್ತೆ ಬಳಿಯ ಮತಗಟ್ಟೆಯಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಮಾಡಿದ್ದಾರೆ.