ಕರ್ನಾಟಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂದು ನಂಬಲಾಗಿರುವ 'ಬಿಗ್ ಬಾಸ್' ತನ್ನ 11ನೇ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಕೊಂಡಿದೆ. ಭಾನುವಾರ ಸಂಜೆ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಜರುಗಿದ್ದು, ಹಳ್ಳಿ ಹೈದ ಹನುಮಂತು ಟ್ರೋಫಿ ಜೊತೆ 50 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ಜನವರಿ 26ರ ಸಂಜೆ ಪ್ರಸಾರ ಕಂಡ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಜರುಗಿತು. ಇದೇ ವೇದಿಕೆಯಲ್ಲಿ ಸುದೀಪ್ ತಾಯಿಯ ಸ್ಮರಣೆ ನಡೆಯಿತು. 2024ರ ಅಕ್ಟೋಬರ್ 20ರಂದು ಕೊನೆಯುಸಿರೆಳೆದ ಸುದೀಪ್ ಅವರ ತಾಯಿ ಸರೋಜಾ ಅವರಿಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೌರವ ಸೂಚಿಸಲಾಯಿತು. ಹಾಡಿಗೆ ಅಮ್ಮ- ಮಗನ ಪಾತ್ರಗಳು ಜೀವ ತುಂಬಿದವು. ಇದು ಇಡೀ ಕಾರ್ಯಕ್ರಮವನ್ನೇ ಭಾವನಾತ್ಮಕ ಕ್ಷಣಕ್ಕೆ ಕೊಂಡೊಯ್ದಿತ್ತು.
ಯುವನ್ ಕುಮಾರ್ ಎಸ್ಕೆ ಎಂಬ ಬಾಲ ಕಲಾವಿದ ಸುದೀಪ್ ಅವರ ಬಾಲ್ಯಕ್ಕೆ ಜೀವ ತುಂಬಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ''ಅವರೆದುರು ಮೊದಲ ಬಾರಿ ನೃತ್ಯ ಮಾಡಿದೆ. ಅವರನ್ನು ನೋಡಲು ಬಹಳ ಉತ್ಸುಕನಾಗಿದ್ದೆ. ಅವರೆದುರು ಡ್ಯಾನ್ಸ್ ಮಾತ್ತೇನೆಂದು ತಿಳಿದು ಬಹಳ ಖುಷಿ ಆಗಿತ್ತು'' ಎಂದು ತಿಳಿಸಿದರು.
ಸುದೀಪ್ ಸರ್ ನಿಮ್ಮನ್ನು ಎತ್ತಿ ಮುದ್ದಾಡಿದರು. ಮುತ್ತಿಟ್ಟು, ವಿಶೇಷ ಉಡುಗೊರೆಯನ್ನೂ ನೀಡಿದ್ರು, ಹೇಗನಿಸಿತು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ನನ್ನ ಬಾಲ್ಯ ತೋರಿಸಿದ್ದಕ್ಕೆ, ನಾನಾಗಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಎಂದು ಸುದೀಪ್ ಸರ್ ತಿಳಿಸಿದ್ರು. ನನಗೆ ಬಹಳ ಖುಷಿಯಾಯ್ತು. ಮುಂದೆ ಚೆನ್ನಾಗಿ ಬೆಳೆಯಿರಿ ಎಂದು ಹಾರೈಸಿದ್ರು'' ಅಂತಾ ಯುವನ್ ಆ ಕ್ಷಣವನ್ನು ನೆನಪಿಸಿಕೊಂಡರು.