ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಕಾಂಬಿನೇಶನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಎಸ್ಎಸ್ಎಂಬಿ 29'. ಇತ್ತೀಚೆಗೆ ಚಿತ್ರದ ಸುತ್ತ ಸಾಕಷ್ಟು ವದಂತಿಗಳು ಹರಡಿದ್ದವು. ಚಿತ್ರಕ್ಕಾಗಿ ಕಾಸ್ಟಿಂಗ್ ಡೈರೆಕ್ಟರ್ ವಿರೇನ್ ಸ್ವಾಮಿ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಗಳಾಗಿತ್ತು. ಹಾಗಾಗಿ ಸಿನಿಮಾ ಸುತ್ತಲಿನ ಅಂತೆಕಂತೆಗಳು ಜೋರಾಗಿವೆ. ಆದ್ರೀಗ ಚಿತ್ರದ ಹಿಂದಿರುವ 'ದುರ್ಗಾ ಆರ್ಟ್ಸ್' ಇಂಥ ವದಂತಿಗಳಿಗೆ ಫುಲ್ಸ್ಟಾಪ್ ಇಟ್ಟಿದೆ. ವಿರೇನ್ ಸ್ವಾಮಿ 'ಎಸ್ಎಸ್ಎಂಬಿ 29'ರ ಭಾಗವಾಗಿದ್ದಾರೆ ಎಂಬ ತಪ್ಪು ವರದಿ ಉದ್ದೇಶಿಸಿ ಮಾತನಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ, ಪ್ರೊಜೆಕ್ಟ್ನಲ್ಲಿ ಅವರ ಪಾತ್ರವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರತಂಡ ಪ್ರತಿಕ್ರಿಯಿಸಿ, "ವಿರೇನ್ ಸ್ವಾಮಿ ನಮ್ಮ ಚಿತ್ರದ ಭಾಗವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಸೂಕ್ತ ಸಮಯಕ್ಕೆ ಎಲ್ಲದರ ಕುರಿತು ಅಧಿಕೃತ ಪ್ರಕಟಣೆಗಳನ್ನು ಪ್ರೊಡಕ್ಷನ್ ಹೌಸ್ ಕೊಡಲಿದೆ'' ಎಂದು ತಿಳಿಸಿದೆ.
ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ಸ್ಗಾಗಿ ಸಾಕಷ್ಟು ಸಂಖ್ಯೆಯ ಸಿನಿಪ್ರಿಯರು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಇದೊಂದು ಎಪಿಕ್ ಅಡ್ವೆಂಚರ್ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅವರ ಇತ್ತೀಚಿನ ನೋಟ, 90ರ ದಶಕದ ತಾರೆಯರನ್ನು ನೆನಪಿಸಿದೆ. ಮತ ಚಲಾಯಿಸಲು ಬಂದ ಸಂದರ್ಭದಲ್ಲಿ ಕ್ಯಾಪ್ ಸಹಾಯದಿಂದ ತಮ್ಮ ಹೊಸ ನೋಟವನ್ನು ಮರೆಮಾಚುವ ಪ್ರಯತ್ನ ನಡೆಸಿದರೂ, ಅಭಿಮಾನಿಗಳಿಗೆ ಒಂದು ಸಣ್ಣ ನೋಟ ಸಿಕ್ಕಿದೆ. ಬ್ಲ್ಯೂ ಟಿ ಶರ್ಟ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದು, ಮಹೇಶ್ ಹೊಸ ಲುಕ್ 'ಎಸ್ಎಸ್ಎಂಬಿ 29'ರಲ್ಲಿ ಚಿತ್ರಿಸಬಹುದಾದ ಪಾತ್ರದ ಬಗ್ಗೆ ಸುಳಿವು ನೀಡಿತು.