ರಾಮೋಜಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ರಾಮೋಜಿ ರಾವ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದು, ತೆಲುಗು ರಾಜ್ಯಗಳು ತೀವ್ರ ದುಃಖ ತಪ್ತವಾಗಿವೆ. ಟಾಲಿವುಡ್ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಚಿರಂಜೀವಿ, ಜೂನಿಯರ್ ಎನ್‌ಟಿಆರ್, ರಾಮ್ ಗೋಪಾಲ್ ವರ್ಮಾ, ವಿಷ್ಣು ಮಂಚು, ಮನೋಜ್ ಮಂಚು ಅವರಂತಹ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ರಾಜಮೌಳಿ ಟ್ವೀಟ್: ಟಾಲಿವುಡ್ನ ಹೆಸರಾಂತ ನಿರ್ದೇಶಕ ಎಸ್.ಎಸ್ ರಾಜಮೌಳಿ ತಮ್ಮ ಪೋಸ್ಟ್ನಲ್ಲಿ, ಮಾಧ್ಯಮ ಕ್ಷೇತ್ರದ ದಿಗ್ಗಜರಿಗೆ ಭಾರತ ರತ್ನ ನೀಡುವಂತೆ ಒತ್ತಾಯಿಸಿದ್ದಾರೆ. ರಾಜಮೌಳಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, "ಓರ್ವ ವ್ಯಕ್ತಿ ತಮ್ಮ 50 ವರ್ಷದ ಪಯಣದಲ್ಲಿ, ಕಠಿಣ ಪರಿಶ್ರಮ ಮತ್ತು ಹೊಸತನದೊಂದಿಗೆ ಲಕ್ಷಾಂತರ ಜನರಿಗೆ ಉದ್ಯೋಗ, ಜೀವನೋಪಾಯ ಮತ್ತು ಭರವಸೆ ಒದಗಿಸಿದ್ದಾರೆ. ರಾಮೋಜಿ ರಾವ್ ಅವರಿಗೆ ನಾವು ಗೌರವ ಸಲ್ಲಿಸುವ ಏಕೈಕ ಮಾರ್ಗವೆಂದರೆ ಅವರಿಗೆ 'ಭಾರತ ರತ್ನ' ಪ್ರಶಸ್ತಿಯನ್ನು ನೀಡುವುದು" ಎಂದು ಬರೆದುಕೊಂಡಿದ್ದಾರೆ.
ರಾಮೋಜಿ ರಾವ್ ಅಂತಿಮ ದರ್ಶನ:ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ರಾಮೋಜಿ ರಾವ್ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ ನಿರ್ದೇಶಕರು ಆಗಮಿಸಿ ಅಂತಿಮ ದರ್ಶನ ಪಡೆದರು. ಆಸ್ಕರ್ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಕೂಡ ಜೊತೆಗಿದ್ದರು. ನಿರ್ದೇಶಕರ ಬೆನ್ನಲ್ಲೇ ಕೆಲ ನಟರು ಆಗಮಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಚಿರಂಜೀವಿ, ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್, ಮಂಚು ಮನೋಜ್ ಸೇರಿದಂತೆ ಹಲವರು ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.