2024ರಲ್ಲಿ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದ್ದ 'ಬಘೀರ' ತೆರೆಕಂಡು ಇಂದಿಗೆ ಒಂದು ವಾರ ಪೂರೈಸಿದೆ. ಡಾ. ಸೂರಿ ನಿರ್ದೇಶನದ 'ಬಘೀರ' ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಒಂದು ವಾರದಲ್ಲಿ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 15.46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಸಿನಿಮಾ ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ಮನರಂಜಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಕನ್ನಡ ಚಿತ್ರರಂಗ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗಿದೆ. ಭೀಮ, ಕೃಷ್ಣಂ ಪ್ರಣಯಂ ಸಖಿ, ಇದೀಗ ಬಘೀರ.. ಹೀಗೆ ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರ ಪ್ರವೇಶಿಸಿದ ಹಲವು ಸಿನಿಮಾಗಳು ಗೆಲುವಿನ ನಗೆ ಬೀರಿದ್ದು, ಯಶಸ್ಸಿನ ಹಾದಿಯಲ್ಲಿ ಸ್ಯಾಂಡಲ್ವುಡ್ ಸಾಗುತ್ತಿದೆ. ಈ ಚಿತ್ರ ನೋಡಿದ ಬಹುತೇಕ ಕನ್ನಡಿಗರು ಹೆಚ್ಚಾಗಿ ಉತ್ತಮ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ಸಿನಿಮಾ ಹಾಲ್ಗಳಲ್ಲಿ 'ಬಘೀರ' ಉತ್ತಮ ಪ್ರದರ್ಶನ ಮುಂದುವರಿಸಿದೆ.
'ಬಘೀರ' ಕಲೆಕ್ಷನ್: ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಬಘೀರ ಅಕ್ಟೋಬರ್ 31, ಕಳೆದ ಗುರುವಾರ ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರ ಈವರೆಗೆ ಒಟ್ಟು 16.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 15.46 ಕೋಟಿ ರೂ. ಆಗಿದೆ. ಈ ಕಲೆಕ್ಷನ್ ಮಾಹಿತಿ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯನ್ನು ಆಧರಿಸಿದೆ. ಅದಾಗ್ಯೂ ಚಿತ್ರತಂಡದ ಕಡೆಯಿಂದ ಘೋಷಣೆ ನಿರೀಕ್ಷಿಸಲಾಗಿದೆ.
ಕನ್ನಡದಲ್ಲಿ 'ಬಘೀರ'ನ ಕಲೆಕ್ಷನ್ ಎಷ್ಟು? (Net Collection)
ಕನ್ನಡ ಭಾಷೆಯ ಸಿನಿಮಾ ಮೊದಲ ದಿನ 2.55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಎರಡನೇ ದಿನ 2.9 ಕೋಟಿ ರೂ., ಮೂರನೇ ದಿನ 3.2 ಕೋಟಿ ರೂ., ನಾಲ್ಕನೇ ದಿನ 2.85 ಕೋಟಿ ರೂ., ಐದನೇ ದಿನ 0.97 ಕೋಟಿ ರೂ., ಆರನೇ ದಿನ 0.83 ಕೋಟಿ ರೂ., ಏಳನೇ ದಿನ 0.63 ಕೋಟಿ ರೂ. ಸೇರಿ ಒಟ್ಟು 13.93 ಕೋಟಿ ರೂಪಾಯಿಯ ವ್ಯವಹಾರ ನಡೆದಿದೆ.