'ಜುಲೈ 12' ಬಂತಂದ್ರೆ ಸಾಕು ಕನ್ನಡ ಚಿತ್ರರಂಗ, ಅಭಿಮಾನಿ ಬಳಗದಲ್ಲಿ ಹಬ್ಬದ ಸಂಭ್ರಮ. ಯಾಕೆ ಅಂತೀರಾ?. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಹೀಗೆ ನಾನಾ ಬಿರುದುಗಳನ್ನು ಹೊಂದಿರುವ ಕನ್ನಡದ ಖ್ಯಾತ ನಟ ಡಾ.ಶಿವ ರಾಜ್‌ಕುಮಾರ್ ಜನ್ಮದಿನ. ಗಾಜನೂರು ಗಂಡು ಹುಟ್ಟಿದ ದಿನವನ್ನು ಕೋಟ್ಯಂತರ ಅಭಿಮಾನಿಗಳು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಆದ್ರೆ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳ ಆಸೆ ಈಡೇರುವುದಿಲ್ಲ. ಈ ಬಗ್ಗೆ ಸ್ವತಃ ಶಿವಣ್ಣನೇ ಪೋಸ್ಟ್ ಶೇರ್ ಮಾಡಿದ್ದಾರೆ.
ಪ್ರತೀ ಜುಲೈ 12ರಂದು ನಾಗವಾರದ ಶಿವ ರಾಜ್‌ಕುಮಾರ್ ನಿವಾಸದೆದುರು ಅಭಿಮಾನಿಗಳು ಬಂದು ಜಾತ್ರೆ ರೀತಿ ಸೇರುತ್ತಿದ್ದರು. ಆದರೆ, ಈ ವರ್ಷ ಕಾರಣಾಂತರಗಳಿಂದ ನಟ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಅಭಿಮಾನಿಗಳಲ್ಲಿ ಸೋಷಿಯಲ್ ಮೀಡಿಯಾ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಶಿವ ರಾಜ್‌ಕುಮಾರ್ ಟ್ವೀಟ್: ''ಅಭಿಮಾನಿ ದೇವರುಗಳಿಗೆ, ಪ್ರತೀ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹ್ಯಾಂಡ್ ಶೇಕ್, ಪ್ರೀತಿಯ ಅಪ್ಪುಗೆ, ನೀವು ನೀಡೋ ಆರ್ಶೀವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಆದರೆ ಈ ವರ್ಷದ ಹುಟ್ಟು ಹಬ್ಬದದಿನ ನಿಮ್ಮ ಜೊತೆ ಇರೋದಿಕ್ಕೆ ಆಗೋದಿಲ್ಲ. ಆದರೆ ವರ್ಷವಿಡೀ ಒಟ್ಟಿಗೆ ಪ್ರತಿದಿನ ಸೆಲೆಬ್ರೇಟ್ ಮಾಡೋಣ. ನಾನು ಬರ್ತ್ ಡೇಗೆ ಇಲ್ಲದೇ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ. ನಿಮ್ಮ ಆರ್ಶೀವಾದ ಸದಾ ಇರಲಿ'' ಎಂದು ಎಕ್ಸ್ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪೋಸ್ಟ್ಗೆ 'ಅಭಿಮಾನಿ ದೇವರುಗಳಲ್ಲಿ ವಿನಂತಿ..' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.