ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಆ್ಯಕ್ಷನ್-ಡ್ರಾಮಾ 'ಸಿಖಂದರ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ಸೌತ್ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಶೂಟಿಂಗ್ ಮುಂದಿನ ತಿಂಗಳು ಜೂನ್ನಲ್ಲಿ ಆರಂಭವಾಗಲಿದೆ. ಸಿಖಂದರ್ ಭಾಯ್ಜಾನ್ ಅಭಿಮಾನಿಗಳಿಗೆ ಈದ್ ಉಡುಗೊರೆ ಅಂತಲೇ ಹೇಳಬಹುದು. ಹೌದು, ಚಿತ್ರ 2025ರ ಈದ್ ಸಂದರ್ಭದಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಅಮೀರ್ ಖಾನ್ ಜೊತೆ ಗಜಿನಿ ಸಿನಿಮಾ ಮಾಡಿದ್ದ ನಿರ್ದೇಶಕ ಎ.ಆರ್.ಮುರುಗದಾಸ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಸದ್ಯ ವಿಲನ್ ಹುಡುಕಾಟ ನಡೆಯುತ್ತಿದೆ. ಚಿತ್ರಕ್ಕಾಗಿ ಮೂವರು ಸೌತ್ ಸ್ಟಾರ್ಗಳ ಹೆಸರುಗಳು ಕೇಳಿ ಬರುತ್ತಿದೆ.
ಸಾಜಿದ್ ನಾಡಿಯಾಡ್ವಾಲಾ ಅವರ ಪ್ರೊಡಕ್ಷನ್ ಹೌಸ್ನಲ್ಲಿ ತಯಾರಾಗುತ್ತಿರುವ ಸಿಖಂದರ್ಗಾಗಿ ಸೌತ್ ಸ್ಟಾರ್ಗಳ ಹೆಸರುಗಳು ಮುಂಚೂಣಿಯಲ್ಲಿವೆ. ದಕ್ಷಿಣ ಪ್ರೇಕ್ಷಕರನ್ನು ಆಕರ್ಷಿಸಲು ಇದೊಂದು ಪ್ರಯತ್ನ ಎನ್ನಲಾಗುತ್ತಿದೆ. ಮೊದಲನೆಯದಾಗಿ, ವಾಂಟೆಡ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿರುವ ಪ್ರಕಾಶ್ ರಾಜ್ ಹಾಗು ರೋಜಾ, ಬಾಂಬೆ ನಟ ಅರವಿಂದ್ ಸ್ವಾಮಿ ಹೆಸರೂ ಕೇಳಿಬಂದಿದೆ. ಸಿಖಂದರ್ನ ವಿಲನ್ ಆಗಿ ಅರವಿಂದ್ ಸ್ವಾಮಿ ಆಯ್ಕೆಯಾದರೆ, ಇವರಿಬ್ಬರ ಕಾಂಬಿನೇಶನ್ನ ಚೊಚ್ಚಲ ಚಿತ್ರವಾಗಲಿದೆ. ಇವರೊಟ್ಟಿಗೆ, ದಕ್ಷಿಣ ಚಿತ್ರರಂಗದ ಯಂಗ್ ಸ್ಟಾರ್ ಕಾರ್ತಿಕೇಯ ಗುಮ್ಮಕೊಂಡ ಅವರ ಹೆಸರು ಮುಂಚೂಣಿಗೆ ಬಂದಿದೆ. 31ರ ಹರೆಯದ ಗುಮ್ಮಕೊಂಡ 2017 ರಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರೇಮಥೋ ಮೀ ಕಾರ್ತಿಕ್, ಆರ್ಎಕ್ಸ್ 100, ಬೆದುರುಲಂಕಾ 2012 ರಂತಹ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಸದ್ಯ ಈ ಮೂವರ ಹೆಸರು ಕೇಳಿಬರುತ್ತಿದ್ದು, ಯಾರು ವಿಲನ್ ಎಂಬ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಇನ್ನಷ್ಟೇ ಕೊಡಬೇಕಿದೆ. ಆದ್ರೀಗ ಭಾಯ್ಜಾನ್ ಅಭಿಮಾನಿಗಳು ಸಿಖಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಯಾರು ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ.