ಕರ್ನಾಟಕ

karnataka

ETV Bharat / entertainment

ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ: ಉದ್ಯಮ ಪಾಲುದಾರರ ವಿರುದ್ಧ ಎಫ್ಐಆರ್ - Soundarya Jagadish Suicide Case - SOUNDARYA JAGADISH SUICIDE CASE

ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Soundarya Jagadish suicide case
ಸೌಂದರ್ಯ ಜಗದೀಶ್ (ETV Bharat)

By ETV Bharat Karnataka Team

Published : May 24, 2024, 12:35 PM IST

ಬೆಂಗಳೂರು: ಉದ್ಯಮಿ ಹಾಗೂ ಕನ್ನಡ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 'ಉದ್ಯಮದ ಪಾಲುದಾರರು ಮೋಸ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಬರೆದಿಟ್ಟಿರುವ ಡೆತ್ ನೋಟ್ ಸಿಕ್ಕಿದೆ' ಎಂದು ಜಗದೀಶ್ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆತ್ಮಹತ್ಯೆಗೆ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಅವರೇ‌ ಕಾರಣ ಹಾಗೂ ಅವರಿಂದ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಶಶಿರೇಖಾ ಆರೋಪಿಸಿದ್ದಾರೆ.

ಏಪ್ರಿಲ್ 4ರಂದು ಸೌಂದರ್ಯ ಜಗದೀಶ್ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಶಶಿರೇಖಾ ನೀಡಿದ ದೂರಿನ ವಿವರ: ಮೇ 18ರಂದು ಜಗದೀಶ್ ಅವರ ರೂಮಿನಲ್ಲಿದ್ದ ಬಟ್ಟೆಯನ್ನು ಪೂಜೆಗಿಡಲು ತೆಗೆದುಕೊಳ್ಳುವಾಗ ಡೆತ್ ನೋಟ್ ಲಭ್ಯವಾಯಿತು. ಅದರಲ್ಲಿ, ಸೌಂದರ್ಯ ಕನ್ಸ್ಟ್ರಕ್ಷನ್​​ನ ಸಹ ಪಾಲುದಾರರಾದ ವಿ.ಎಸ್.ಸುರೇಶ್, ಹೊಂಬಣ್ಣ ಎಸ್.ಪಿ ಹಾಗೂ ಸುಧೀಂದ್ರ ಎಂಬವರು ಜಗದೀಶ್ ಅವರಿಂದ ಹಣವನ್ನು ಹೂಡಿಕೆ ಮಾಡಿಸಿದ್ದರು. ಕಂಪನಿ ಲಾಭದಲ್ಲಿದ್ದರೂ ಸಹ ಸುಳ್ಳು ನಷ್ಟ ತೋರಿಸಿ ತಮ್ಮ ಕುಟುಂಬದ ಆಸ್ತಿಗಳನ್ನು ಬ್ಯಾಂಕ್‌ನಲ್ಲಿ ಅಡವಿರಿಸಿ ಸಾಲ ಪಡೆದು ಸುಮಾರು 60 ಕೋಟಿ ರೂ.ಯಷ್ಟು ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ. ನಂತರ ಸಬೂಬು ಹೇಳಿ ಖಾಲಿ ಚೆಕ್ ಹಾಗೂ ಖಾಲಿ ಹಾಳೆಗಳ ಮೇಲೆ ಜಗದೀಶ್ ಸಹಿಯನ್ನು ನಕಲಿಸಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ಜಗದೀಶ್ ಅವರಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ‌. ಅದೇ ವಿಚಾರವಾಗಿ ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ನಂತರ, ಸುರೇಶ್ ಹಾಗೂ ಹೊಂಬಣ್ಣ ಅವರ ಬಳಿ ಕೇಳಿದಾಗ ಅವರು ಹಣ ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಒಂದು ವಾರಗಳ ಹಿಂದೆ ಸುರೇಶ್ ಹಾಗೂ ಹೊಂಬಣ್ಣ ಅವರು ಜಗದೀಶ್ ಅವರಿಗೆ ನಿರಂತರವಾಗಿ ಕರೆ ಮಾಡುತ್ತಿದ್ದರು. ಆ ಕರೆಗಳು ಬಂದಾಗ ಜಗದೀಶ್ ಜರ್ಜರಿತರಾಗುತ್ತಿದ್ದರು ಎಂದು ಶಶಿರೇಖಾ ಆರೋಪಿಸಿದ್ದಾರೆ.

ಇದನ್ನೂ ಓದಿ:ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವಕ-ಯುವತಿಗೆ ಆಟೋ ಚಾಲಕನಿಂದ ಕಿರುಕುಳ; ಪ್ರಕರಣ ದಾಖಲು - Sexual Harassment

ABOUT THE AUTHOR

...view details