ಕರ್ನಾಟಕ

karnataka

ETV Bharat / entertainment

'ಬ್ಲಿಂಕ್' ಸಿನಿಮಾಗೆ ಶಿವರಾಜ್​​ಕುಮಾರ್​​ ಸಪೋರ್ಟ್; ಹೊಸ ತಂಡಗಳ ಬೆನ್ನು ತಟ್ಟಬೇಕೆಂದ ನಟ

ಬ್ಲಿಂಕ್​ ಸಿನಿಮಾಗೆ ನಟ ಶಿವರಾಜ್​​ಕುಮಾರ್ ಬೆಂಬಲ ಸೂಚಿಸಿದ್ದಾರೆ.

ShivaRajkumar supports blink movie
ಬ್ಲಿಂಕ್ ಸಿನಿಮಾಗೆ ಶಿವರಾಜ್​​ಕುಮಾರ್​​ ಸಪೋರ್ಟ್

By ETV Bharat Karnataka Team

Published : Mar 13, 2024, 12:30 PM IST

ಕನ್ನಡ ಚಿತ್ರರಂಗದಲ್ಲಿ ಮೂಡಿ ಬರುತ್ತಿರುವ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಮನರಂಜಿಸುವಲ್ಲಿ ಯಶಸ್ಸು ಕಾಣುತ್ತಿವೆ. ಇದೇ ಸಾಲಿನಲ್ಲಿ ಮೂಡಿಬಂದ ದೀಕ್ಷಿತ್ ಶೆಟ್ಟಿ ಅಭಿನಯದ 'ಬ್ಲಿಂಕ್' ಸಿನಿಮಾ ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬ್ಲಿಂಕ್ ಚಿತ್ರದಲ್ಲಿ ಹೊಸಬರ ಶ್ರಮ ಅಡಗಿದೆ. ಹಾಗೆಂದ ಮಾತ್ರಕ್ಕೆ ಇದು ಮಾಮೂಲಿ ಚಿತ್ರವಲ್ಲ. ಬದಲಿಗೆ ಹೊಸ ಪ್ರತಿಭೆಗಳ ವಿಭಿನ್ನ ಪ್ರಯತ್ನ. ಇಂತಹ ತಂಡಗಳನ್ನು ಪ್ರೇಕ್ಷಕರು ಬೆನ್ನು ತಟ್ಟಬೇಕು ಎಂದಿದ್ದಾರೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್.

ಕಳೆದ ಶುಕ್ರವಾರ ತೆರೆಗಪ್ಪಳಿಸಿರೋ 'ಬ್ಲಿಂಕ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಶಿವಣ್ಣ, ಬ್ಲಿಂಕ್ ಚಿತ್ರದ ಬಗ್ಗೆ ಬಹಳ ಕೇಳುತ್ತಿದ್ದೇನೆ. ಆದಷ್ಟು ಬೇಗ ನೋಡ್ತೀನಿ. ಹೀಗೆ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನು ತಟ್ಟಿದಾಗ ರಂಗಿತರಂಗ, ಉಳಿದವರು ಕಂಡಂತೆ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಹೀಗೆ ಎಷ್ಟೋ ಚಿತ್ರಗಳು ಗೆಲ್ಲೋದಕ್ಕೆ ಸಾಧ್ಯವಾಯಿತು. ಈ ಹೊಸ ತಂಡ ತಮ್ಮ ಶಕ್ತಿ ಮೀರಿ ಪ್ರಯತ್ನಪಟ್ಟಿದೆ. ಥಿಯೇಟರ್​ಗೆ ಬಂದು ಬ್ಲಿಂಕ್ ಚಿತ್ರವನ್ನು ವೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.

ಬ್ಲಿಂಕ್ ಸಿನಿಮಾ ಮಲಯಾಳಂನಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ಈ ಚಿತ್ರವನ್ನು ನೋಡುತ್ತಿದ್ರು. ಆದ್ರೆ ಇದು ಕನ್ನಡ ಸಿನಿಮಾವಾದ ಹಿನ್ನೆಲೆ ಯಾರೂ ನೋಡುತ್ತಿಲ್ಲ ಎಂದು ನಿರ್ದೇಶಕ ಸಿಂಪಲ್ ಸುನಿ ಖಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹೊಸಬರು ಚಿತ್ರರಂಗಕ್ಕೆ ಬಂದಾಗ ಹೊಸತನವನ್ನು ಹೊತ್ತು ಬರುತ್ತಾರೆ ಎಂಬುದಕ್ಕೆ ಬ್ಲಿಂಕ್ ಸಿನಿಮಾ ಉತ್ತಮ ಉದಾಹರಣೆ. ಟೈಮ್​ ಟ್ರಾವೆಲಿಂಗ್​ನ ಕಹಾನಿಯನ್ನು ತೆರೆದಿಡುವ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಬ್ಲಿಂಕ್​ ಸಿನಿಮಾಗೆ ನಟ ಶಿವರಾಜ್​​ಕುಮಾರ್ ಬೆಂಬಲ

ಮಾರ್ಚ್ 8ರಂದು ಕರಟಕ ದಮನಕ ಹಾಗೂ ರಂಗನಾಯಕದಂತಹ ದೊಡ್ಡ ಸ್ಟಾರ್ಸ್ ಸಿನಿಮಾಗಳ ಜೊತೆಯಲ್ಲಿ ತೆರೆಗೆ ಬಂದ ಚಿತ್ರವೇ 'ಬ್ಲಿಂಕ್'. ಈ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮನಸಾರೆ ಕೊಂಡಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಿ, ಖಂಡಿತಾ ಇಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೂ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ.

ಬ್ಲಿಂಕ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿರುವ ಹಿನ್ನೆಲೆ ನಿರ್ದೇಶಕ ಸುನಿ ಥಿಯೇಟರ್​ಗೆ ಆಗಮಿಸಿ ಚಿತ್ರ ವೀಕ್ಷಿಸಿದ್ದಾರೆ. ‌''ಬ್ಲಿಂಕ್ ಸಿನಿಮಾ ವೀಕ್ಷಿಸಿದೆ. ಚಿತ್ರತಂಡ ನನ್ನನ್ನು ಆಹ್ವಾನಿಸಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಇರುವ 10, 20 'ಬ್ಲಿಂಕ್' ಚಿತ್ರದ ಶೋಗಳು 100, 200 ಶೋಗಳು ಆಗಬೇಕು. ನೀವೆಲ್ಲ ಹೋಗಿ ಸಿನಿಮಾ ನೋಡಲೇಬೇಕು. 'ಒಂದು ಸರಳ ಪ್ರೇಮಕಥೆ' ನೋಡದೇ ಇದ್ದರೂ ಪರವಾಗಿಲ್ಲ, ಈ ಸಿನಿಮಾ ನೋಡಿ'' ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:'ಪ್ರೇಮಲು' ನಾಯಕಿ ಮಮಿತಾ ಅಭಿನಯಕ್ಕೆ ನಿರ್ದೇಶಕ ರಾಜಮೌಳಿ ಫಿದಾ

ಸಿಂಪಲ್ ಸುನಿ ಮಾತ್ರವಲ್ಲ, ನಟ ನವೀನ್ ಶಂಕರ್ ಹಾಗೂ‌ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ಬ್ಲಿಂಕ್​ಗೆ ಬಹುಪರಾಕ್ ಎನ್ನುತ್ತಿದ್ದಾರೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಚಿತ್ರಕ್ಕೆ ರವಿಚಂದ್ರ ಎ.ಜೆ ಬಂಡವಾಳ ಹೂಡಿದ್ದಾರೆ. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ:ನನ್ನಿಷ್ಟದಂತೆ ಮದುವೆ ಆಗಿದ್ದೇನೆ, ಗುಟ್ಟಾಗಿ ವಿವಾಹ ಆಗಿಲ್ಲ: ನಟಿ ದೀಪಿಕಾ ದಾಸ್​

ಇನ್ನೂ ಸಿನಿಮಾವನ್ನು ವಿದೇಶದಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಹೊರಟಿದೆ. ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್, ಸಿಂಗಾಪುರ್, ಮಲೇಷಿಯಾ, ಜರ್ಮನ್, ಐರ್ಲೆಂಡ್‌‌, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಚಿತ್ರ ರಿಲೀಸ್​ ಆಗಲಿದೆ. ಡ್ರೀಮ್ ಸ್ಕ್ರೀನ್ ಇಂಟರ್​​ನ್ಯಾಷನಲ್ ಹೊರದೇಶಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದೆ.

ABOUT THE AUTHOR

...view details