ಪುತ್ರಿ ಸೋನಾಕ್ಷಿ ಸಿನ್ಹಾ ವಿವಾಹದ ನಂತರ ತಂದೆ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಹಲವು ಅಂತೆಕಂತೆಗಳು ಹುಟ್ಟಿಕೊಂಡಿದ್ದವು. ಸೋಫಾದಿಂದ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕೂಡ ಹೇಳಲಾಗಿತ್ತು. ವಿವಾಹ ಸಮಾರಂಭದ ಬಳಿಕ ಆದ ಟ್ರೋಲ್‌ಗಳನ್ನು ಉದ್ದೇಶಿಸಿ ಶತ್ರುಘ್ನ ಸಿನ್ಹಾ ಇದೀಗ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಶಸ್ತ್ರಚಿಕಿತ್ಸೆ ವದಂತಿಗೆ ಪ್ರತಿಕ್ರಿಯಿಸಿ, "ಅರೆ ಭಾಯ್, ನನಗೆ ಸರ್ಜರಿ ಆಗಿರೋದು ನನಗೇ ಗೊತ್ತಿಲ್ಲ" ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಹೋದ ಬಗ್ಗೆ ಪ್ರಶ್ನಿಸಿದಾಗ, ರುಟೀನ್ ಆ್ಯನುವಲ್ ಫುಲ್ ಬಾಡಿ ಚೆಕಪ್ಗಾಗಿ ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು. 60 ವರ್ಷ ದಾಟಿದ್ದು, ಆರೋಗ್ಯದೆಡೆಗೆ ಗಮನ ಕೊಡಬೇಕಾಗುತ್ತದೆ ಎಂಬುದನ್ನು ಒತ್ತಿ ಹೇಳಿದರು. ನಟನಿಗೀಗ 77 ವರ್ಷ.
"ಕಳೆದ ಮೂರು ತಿಂಗಳಿನಿಂದ ನನ್ನ ಚುನಾವಣಾ ಪ್ರಚಾರದ ಭಾಗವಾಗಿ ನಿರಂತರವಾಗಿ ಪ್ರಯಾಣಿಸುತ್ತಿದ್ದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಮಗಳು ಮದುವೆಯಾದಳು. ನಾನೀಗ ಅದೇ ಬಿಸಿ ರಕ್ತದ, ಕ್ರಿಯಾಶೀಲ ಯುವಕನಲ್ಲ. ದಿನಕ್ಕೆ ಮೂರು ಶಿಫ್ಟ್ ಕೆಲಸ ಮಾಡುವ ಸಾಮರ್ಥ್ಯ, ರಾತ್ರಿ ಪಾರ್ಟಿ ಮಾಡುವ ಎನರ್ಜಿ ಈಗಿಲ್ಲ'' ಎಂದು ಸಿನ್ಹಾ ತಿಳಿಸಿದರು.