ರುದ್ರಶಿವ ನಿರ್ದೇಶನದ 'ಶಭ್ಬಾಷ್' ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಇದೀಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣವನ್ನೂ ಮುಗಿಸಿರುವ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ. ಚನ್ನಗಿರಿಯಲ್ಲಿ ಮೊದಲನೇ ಹಂತದ ಚಿತ್ರೀಕರಣ ನಡೆಸಿದ್ದ ಚಿತ್ರತಂಡ, ಮಡಿಕೇರಿ ಸುತ್ತಮುತ್ತಲಿನ ಆಕರ್ಷಕ ವಾತಾವರಣದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಸಮಾಪ್ತಿಗೊಳಿಸಿದೆ. ಬಳಿಕ ಚಿತ್ರೀಕರಣದ ಅನುಭವಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಸ್ಯಾಂಡಲ್ವುಡ್ನಲ್ಲಿ ಕ ಮತ್ತು ಮಳೆಬಿಲ್ಲು ಸಿನಿಮಾಗಳಿಂದ ಗಮನ ಸೆಳೆದಿರುವ ಶರತ್ ಅವರೀಗ ಸಿನಿ ಪ್ರೇಕ್ಷಕರಿಂದ 'ಶಭ್ಬಾಷ್' ಎನಿಸಿಕೊಳ್ಳುವುದಕ್ಕೆ ಬರುತ್ತಿದ್ದಾರೆ. ಶರತ್ ಜೋಡಿಯಾಗಿ ನಿಸರ್ಗ ಅಭಿನಯಿಸಿದ್ದಾರೆ. ನಿರ್ದೇಶಕ ರುದ್ರಶಿವ ಅತ್ಯಂತ ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿಕೊಂಡು ಕಥೆಗೆ ಪೂರಕವಾಗಿ ಮಡಿಕೇರಿಯ ಗೋಣಿಕೊಪ್ಪ, ಬಿರನಾಣಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈ ಭಾಗದ ಟಾಟ ಟೀ ಎಸ್ಟೇಟ್, ಬೆಟ್ಟಗುಡ್ಡ, ಜಲಪಾತ ಪ್ರದೇಶಗಳು ಸೇರಿ ಮುಂತಾದೆಡೆಗಳಲ್ಲಿ ಚಿತ್ರದ ಬಹುಮುಖ್ಯ ಭಾಗಗಳನ್ನು ಸೆರೆಹಿಡಿಯಲಾಗಿದೆ. ದುರ್ಗಮ ಪ್ರದೇಶಗಳಲ್ಲಿ ನಟ ಶರತ್ ಹಾಗೂ ನಟಿ ನಿಸರ್ಗ ಸೇರಿದಂತೆ ಇಡೀ ಚಿತ್ರತಂಡ ಬಹಳ ಉತ್ಸಾಹದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿತ್ತು.
ವಿಶೇಷವಾಗಿ, ಎರಡು ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಇಲ್ಲಿ ವಾಸವಾಗಿರುವ ಜೇನುಕುರುಬರ ಹಾಡಿಗಳಿಗೆ ಭೇಟಿ ನೀಡಿದ್ದ ಚಿತ್ರತಂಡ, ಆ ಬುಡಕಟ್ಟು ಜನಾಂಗದ ಹಾಡೊಂದನ್ನು ಚಿತ್ರೀಕರಿಸಿಕೊಂಡಿದೆ. ಅದಕ್ಕೆ ಸಾಹಿತ್ಯ, ಸಂಗೀತವೆಲ್ಲ ಆ ಬುಡಕಟ್ಟು ಜನರದ್ದೇ ಎಂಬುದು ವಿಶೇಷ. ಒಟ್ಟಾರೆ ಶಭ್ಬಾಷ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಜೇನುಕುರುಬರ ಈ ಹಾಡೂ ಕೂಡಾ ಸೇರಿಕೊಂಡಿದೆ.