ಕೆಂಪ, ಕರಿಯ 2 ಚಿತ್ರಗಳ ಮೂಲಕ ಬಣ್ಣದ ಲೋಕದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಸಂತೋಷ್. ಈ ಚಿತ್ರಗಳ ಬಳಿಕ ಸಂತೋಷ್ ತುಳುನಾಡಿನ ದೈವಾರಾಧನೆ ಕಥೆಯನ್ನಾಧರಿಸಿರೋ ''ಸತ್ಯಂ'' ಚಿತ್ರದೊಂದಿಗೆ ಸಿನಿಪ್ರಿಯರೆದುರು ಬರಲು ಸಜ್ಜಾಗಿದ್ದಾರೆ.
ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಅಶೋಕ್ ಕಡಬ ನಿರ್ದೇಶನವಿರುವ 'ಸತ್ಯಂ' ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದೆ. ಈ ಹಿಂದೆ ಸತ್ಯಂ ಟೀಸರ್ ಬಿಡುಗಡೆಯಾಗಿ ಮಿಲಿಯನ್ಗಟ್ಟಲೆ ಜನ ವೀಕ್ಷಿಸಿದ್ದು, ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಬಿಡುಗಡೆ ಹೊಸ್ತಿಲಿನಲ್ಲಿರುವ 'ಸತ್ಯಂ' ಸೆನ್ಸಾರ್ ಸರ್ಟಿಫಿಕೆಟ್ ಪಡೆದುಕೊಂಡಿದೆ. ಈ ವಿಚಾರವನ್ನು ನಿರ್ಮಾಪಕರಾದ ಮಹಾಂತೇಶ್ ವಿ.ಕೆ ಹಂಚಿಕೊಂಡಿದ್ದಾರೆ. ಯು\ಎ ಸರ್ಟಿಫಿಕೆಟ್ನೊಂದಿಗೆ, ಸೆನ್ಸಾರ್ ಮಂಡಳಿ ಅಧಿಕಾರಿಗಳು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಗಣಪ ನಂತರ ಸಂತೋಷ್ ಬಾಲರಾಜ್ ಹಾಗೂ ಕನ್ನಡತಿ ಖ್ಯಾತಿಯ ರಂಜಿನಿ ರಾಘವನ್ ತೆರೆಹಂಚಿಕೊಂಡಿರುವ ಚಿತ್ರವಿದು. ರಂಗಿತರಂಗ, ಕಾಂತಾರ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡೂ ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ 'ಸತ್ಯಂ'. ಹಾಗೆಂದ ಮಾತ್ರಕ್ಕೆ ಇದು ಆ ಎರಡು ಸಿನಿಮಾಗಳ ಗೆಲುವಿನ ಪ್ರಭೆಯಲ್ಲಿ ರೂಪುಗೊಂಡಿರುವ ಚಿತ್ರ ಅಂದುಕೊಳ್ಳುವಂತಿಲ್ಲ. ಕಾಂತಾರಕ್ಕೂ ಮುನ್ನವೇ ಸತ್ಯಂ ಕಥೆ ಸಿದ್ಧವಾಗಿತ್ತೆಂಬ ವಿಚಾರವನ್ನು ಖುದ್ದು ನಿರ್ದೇಶಕರು ಖಚಿತಪಡಿಸಿದ್ದಾರೆ. ಇಂಥ ಭಿನ್ನ ಕಥಾನಕವನ್ನು ಕಂಡು ಸೆನ್ಸಾರ್ ಅಧಿಕಾರಿಗಳು ಖುಷಿಪಟ್ಟಿದ್ದಾರೆ. ಒಂದು ಅಪರೂಪದ ಕಥೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಅಶೋಕ್ ಕಡಬ ಇದುವರೆಗೂ ನಿರ್ದೇಶಕರಾಗಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು. ಇಂತಹ ನಿರ್ದೇಶಕರು ಪಕ್ಕಾ ಮಾಸ್ ಕಥನದತ್ತ ಹೊರಳಿದಾಗ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತದೆ. ಅಶೋಕ್ ಕಡಬ ಸತ್ಯಂ ಎಂಬ ಪಕ್ಕಾ ಮಾಸ್ ಥ್ರಿಲ್ಲರ್ ಕಥಾನಕವನ್ನು ಕೈಗೆತ್ತಿಕೊಂಡಾಗಲೂ ಇಂಥಾದ್ದೇ ಕುತೂಹಲ ಮೂಡಿಕೊಂಡಿತ್ತು. ಟೀಸರ್ ಬಿಡುಗಡೆಯಾದಾಕ್ಷಣ ಅದು ಮತ್ತಷ್ಟು ತೀವ್ರಗೊಂಡಿತ್ತು. ಮಿಲಿಯನ್ಗಟ್ಟಲೆ ವೀವ್ಸ್ ಪಡೆದುಕೊಳ್ಳುವ ಮೂಲಕ ಸತ್ಯಂ ಸೃಷ್ಟಿಸಿದ್ದ ಸಂಚಲನ ಸಣ್ಣದ್ದೇನಲ್ಲ. ವಿಶೇಷವೆಂದರೆ, ಈ ಸಿನಿಮಾದಲ್ಲಿಯೂ ಪಂಜುರ್ಲಿ ದೈವದ ಆರಾಧನೆಯ ಕಥೆಯಿದೆ. ಅದರ ಸುತ್ತ ಮೈನವಿರೇಳಿಸುವ ದೃಶ್ಯಗಳು ಇರಲಿದೆ ಅಂತಾರೆ ನಿರ್ದೇಶಕ ಅಶೋಕ್ ಕಡಬ.