ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಜತೆಗೊಂದು ಪ್ರೇಮ್ಕಹಾನಿ ಹೊತ್ತು ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ "ಸಂಜು ವೆಡ್ಸ್ ಗೀತಾ 2" ಕೊನೆ ಕ್ಷಣದಲ್ಲಿ ತನ್ನ ಬಿಡುಗಡೆಯನ್ನು ಮುಂದೂಡಿದೆ. 2025ರ ಚಂದನವನದ ಅತ್ಯಂತ ಬಹುನಿರೀಕ್ಷಿತ ಚಿತ್ರವಾಗಿ ಗುರುತಿಸಿಕೊಂಡಿದ್ದ "ಸಂಜು ವೆಡ್ಸ್ ಗೀತಾ 2" ಕೊನೆ ಕ್ಷಣದಲ್ಲಿ ತನ್ನ ರಿಲೀಸ್ ಟೇಟ್ ಅನ್ನು ಮುಂದೂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದಾಗ್ಯೂ, ಸಿನಿಮಾ ಗೆಲ್ಲಬೇಕು, ಸೂಕ್ತ ಕಾರಣಗಳಿಂದ ಮುಂದೂಡಿಕೆಯಾಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸತೊಡಗಿದ್ದಾರೆ.
ಕಳೆದ ರಾತ್ರಿ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಸಿನಿಮಾ ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲೂ ಇಂದು ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದ್ರೆ ಸಿನಿಮಾ ಮುಂದೂಡಿಕೆ ಆಗಿದ್ದು, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಪೋಸ್ಟರ್ನಲ್ಲಿ ತಿಳಿಸಿದ್ದಾರೆ. ಹಾಗೇ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರಲ್ಲೂ ವಿಳಂಬಕ್ಕೆ ಕ್ಷಮೆಯಾಚಿಸಿದ್ದಾರೆ.
ಚಿತ್ರಕ್ಕೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಂದನವನದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿಡ್ಲಘಟ್ಟದಿಂದ ಶುರುವಾಗೋ ಸಿನಿಮಾ ಸ್ವಿಟ್ಜರ್ಲ್ಯಾಂಡ್ವರೆಗೆ ಸಾಗಲಿದ್ದು, ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಬ್ಯಾನರ್ ಅಡಿಯಲ್ಲಿ ಚಲವಾದಿ ಕುಮಾರ್ ನಿರ್ಮಿಸಿದ್ದಾರೆ. ಸಿನಿಮಾ ಮೇಲೆ ಅಭಿಮಾನಿಗಳು ಈಗಾಗಲೇ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು.