ಬಹುನಿರೀಕ್ಷಿತ 'ಪುಷ್ಪ-2' ಚಿತ್ರದ ಬಿಡುಗಡೆ ಸಂದರ್ಭ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಾಲಯವು ಜನವರಿ 3ಕ್ಕೆ ಕಾಯ್ದಿರಿಸಿದೆ. ಅಲ್ಲು ಅರ್ಜುನ್ ಜಾಮೀನು ಅರ್ಜಿಯನ್ನು ವಿರೋಧಿಸಿ ಚಿಕ್ಕಡಪಲ್ಲಿ ಪೊಲೀಸ್ ಕೌಂಟರ್-ಅಫಿಡವಿಟ್ ಸಲ್ಲಿಸಿದರು. ಮತ್ತೊಂದೆಡೆ, ಅರ್ಜುನ್ ಅವರ ಕಾನೂನು ತಂಡವು ಈ ಪ್ರಕರಣದಲ್ಲಿ ನಟ ಯಾವುದೇ ಸಂಬಂಧ ಹೊಂದಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಬಿಎಸ್ಎನ್ ಸೆಕ್ಷನ್ 105ರ ಅಡಿಯಲ್ಲಿ ಅನ್ವಯಿಸುವುದಿಲ್ಲ ಎಂದು ವಾದಿಸಿತು.
ನಾಂಪಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವ್ಯಾಪಕವಾಗಿ ಗಮನ ಸೆಳೆದಿದೆ. ಎರಡೂ ಕಡೆಯವರು ತಮ್ಮ ವಾದವನ್ನು ಮಂಡಿಸಿದರು. ಅಲ್ಲು ಅರ್ಜುನ್ ಅವರ ವಕೀಲರು ಜಾಮೀನು ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆಯಲ್ಲಿ ನಟ ನೇರ ಸಂಪರ್ಕ ಹೊಂದಿಲ್ಲ ಎಂದು ಉಲ್ಲೇಖಿಸಿದರು. ಎರಡೂ ಕಡೆಯ ವಾದ- ವಿವಾದ ಪರಿಶೀಲಿಸಿದ ನ್ಯಾಯಾಲಯವು, ಜನವರಿ 3ರಂದು ಜಾಮೀನಿಗೆ ಸಂಬಂಧಿಸಿದ ತೀರ್ಪು ನೀಡುವುದಾಗಿ ಘೋಷಿಸಿತು.
ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್ ಮತ್ತು ಅದಾದ ನಂತರ ನಟ ಅಲ್ಲು ಅರ್ಜುನ್ ಬಂಧನವಾಗಿದ್ದ ಬಗ್ಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಮಂಗಳಗಿರಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ಘಟನೆ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಲ್ಲು ಅರ್ಜುನ್ ಅವರ ಒಳಗೊಳ್ಳುವಿಕೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಚಿಕ್ಕ ಸಮಸ್ಯೆಯಾಗಬೇಕಿದ್ದದ್ದು ದೊಡ್ಡದಾಗಿದೆ, ಕೋಲಿನಿಂದ ಪರಿಹರಿಸಬಹುದಾದ ವಿಷಯಕ್ಕೆ ಕೊಡಲಿಯೇಟು ಹಾಕಿದಂತೆ" ಎಂದು ಹೇಳಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಹೊಗಳಿದ ನಟ, ಅವರು ತಳಮಟ್ಟದಿಂದ ಬೆಳೆದ ಮಹಾನ್ ನಾಯಕ ಎಂದು ಬಣ್ಣಿಸಿದರು. ಪವನ್ ಕಲ್ಯಾಣ್ ಪ್ರಕಾರ, ರೇವಂತ್ ರೆಡ್ಡಿ ಅವರು ಟಿಕೆಟ್ ದರವನ್ನು ಹೆಚ್ಚಿಸುವುದು ಸೇರಿದಂತೆ ಚಿತ್ರರಂಗಕ್ಕೆ ನೀಡಿದ ಬೆಂಬಲ ಸಲಾರ್ ಮತ್ತು ಪುಷ್ಪ 2 ಚಿತ್ರಗಳ ಯಶಸ್ಸಿಗೆ ಕಾರಣವಾಯಿತು.