ಸೋಮವಾರ ರಾತ್ರಿ ಚೆನ್ನೈನಲ್ಲಿ ಪ್ರತಿಷ್ಠಿತ 'ಬಿಹೈಂಡ್‌ವುಡ್ಸ್ ಗೋಲ್ಡ್ ಹಾಲ್ ಆಫ್ ಫೇಮರ್ಸ್' (Behindwoods Gold Hall of Famers) ಈವೆಂಟ್ ಜರುಗಿತು. ಸಮಾರಂಭಕ್ಕೆ ಸಿನಿ ವಲಯದ ಖ್ಯಾತನಾಮರು ಸಾಕ್ಷಿಯಾಗಿದ್ದರು. ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆಗಿರೋ 'ಅನಿಮಲ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು 2023ರ 'ಬಿಹೈಂಡ್‌ವುಡ್ ಗೋಲ್ಡ್ ಹಾಲ್ ಆಫ್ ಫೇಮ್ ಫಿಲ್ಮ್ ಮೇಕರ್ ಪ್ರಶಸ್ತಿ'ಯನ್ನು ಗೆದ್ದುಕೊಂಡಿದ್ದಾರೆ. ಅಲ್ಲದೇ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಸ್ವೀಕರಿಸಿರುವ ಮತ್ತು ಬಾಕ್ಸ್ ಆಫೀಸ್ನಲ್ಲೂ ಸದ್ದು ಮಾಡಿರೋ 'ಹಾಯ್ ನಾನ್ನ' ಚಿತ್ರ ಒಟ್ಟು ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಈವೆಂಟ್‌ನಲ್ಲಿ, ಸಂದೀಪ್ ರೆಡ್ಡಿ ವಂಗಾ ಅವರು 'ಹಾಯ್ ನಾನ್ನ'ದಲ್ಲಿನ ಅಮೋಘ ಅಭಿನಯಕ್ಕಾಗಿ ನಟ ನಾನಿ ಅವರಿಗೆ ಅತ್ಯುತ್ತಮ ನಟ (ಪ್ರಮುಖ ಪಾತ್ರದಲ್ಲಿ ಉತ್ತಮ ನಟನೆ) ಪ್ರಶಸ್ತಿಯನ್ನು ಹಸ್ತಾಂತರಿಸಿದರು. ಅಲ್ಲದೇ ಚಿತ್ರದ ನಾಯಕ ನಟಿ ಮೃಣಾಲ್ ಠಾಕೂರ್ ಮತ್ತು ನಿರ್ದೇಶಕ ಶೌರ್ಯುವ್ ಕೂಡ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
2023ರ ಡಿಸೆಂಬರ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ 'ಹಾಯ್ ನಾನ್ನ' ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಬಹುತೇಕ ಮೆಚ್ಚುಗೆ ಸ್ವಿಕರಿಸಿದೆ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೂ ಮೆಚ್ಚುಗೆಯ ಹಿಡಿತ ಸಾಧಿಸಿದೆ. ಸಿನಿಮಾ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಸ್ವಿಕರಿಸುವ ನಿರೀಕ್ಷೆಯಿದೆ. ಹೃದಯಸ್ಪರ್ಶಿ ಕಥೆ, ತೆರೆ ಮೇಲೆ ರವಾನಿಸಿದ ರೀತಿ, ಕಲಾವಿದರ ಅಮೋಘ ಅಭಿನಯ, ತಾಂತ್ರಿಕ ಅಂಶಗಳು ಚಿತ್ರದ ಯಶಸ್ಸಿಗೆ ಕಾರಣವಾಗಿವೆ. ಚಿತ್ರವನ್ನು ವೈರಾ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ.