ದಕ್ಷಿಣ ಚಿತ್ರರಂಗದ ಬೇಡಿಕೆಯ ನಟಿಯರಲ್ಲೋರ್ವರಾದ ಸಮಂತಾ ರುತ್ ಪ್ರಭು ಕಳೆದ ಏಳು ತಿಂಗಳಿನಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2023ರ ಜುಲೈನಲ್ಲಿ ಕುಶಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ತಮ್ಮ ಆರೋಗ್ಯದ ಕಡೆ ಗಮನಹರಿಸಲು ಸಿನಿಮಾಗಳಿಂದ ವಿರಾಮ ಪಡೆದಿದ್ದರು. ಉತ್ತಮ ಆರೋಗ್ಯಕ್ಕಾಗಿ ಸಮಯ ಮೀಸಲಿಟ್ಟ ಬಳಿಕ ಇದೀಗ ತಮ್ಮ ಕೆಲಸಕ್ಕೆ ಮರಳಲು ಸಿದ್ಧರಾದಂತೆ ತೋರುತ್ತಿದೆ.
ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಿನಿ ವೃತ್ತಿಜೀವನಕ್ಕೆ ಮರಳುವ ಕುರಿತು ಮಾತನಾಡಿರುವ ಸಣ್ಣ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ನಿರುದ್ಯೋಗಿಯಾಗಿದ್ದೆ ಎಂಬುದನ್ನು ನಟಿ ಹಾಸ್ಯಮಯವಾಗಿ ಒಪ್ಪಿಕೊಂಡಿದ್ದಾರೆ. ಕಮ್ ಬ್ಯಾಕ್ ಮಾಡುವ ಬಗ್ಗೆ ಘೋಷಿಸುವುದರ ಜೊತೆಗೆ, ತಮ್ಮ ಸ್ನೇಹಿತರೊಂದಿಗೆ ಹೆಲ್ತ್ ಪಾಡ್‌ಕಾಸ್ಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ಬಹಿರಂಗಪಡಿಸಿದರು. ಈ ಕಾರ್ಯಕ್ರಮ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ವಿಡಿಯೋದಲ್ಲಿ ನಟಿ ರೆಡ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡರು. ಮೇಕಪ್ ಇಲ್ಲದೆಯೂ ಬೆರಗುಗೊಳಿಸುವ ನೋಟ ಬೀರಿದ್ದಾರೆ. "ಹಲೋ" ಎಂದು ವಿಡಿಯೋ ಪ್ರಾರಂಭಿಸಿದ್ದು, "ಅಂತಿಮವಾಗಿ ನಾನು ಕೆಲಸಕ್ಕೆ ಮರಳುತ್ತಿದ್ದೇನೆ. ಆದರೆ, ನಿಮ್ಮಲ್ಲಿ ಹೆಚ್ಚಿನವರು 'ನೀವು ಯಾವಾಗ ಮರಳಿ ಕೆಲಸಕ್ಕೆ ಹೋಗುತ್ತೀರಿ ಎಂಬ ಪ್ರಶ್ನೆಯನ್ನು ಕೇಳುತ್ತೀರಿ ಎಂಬುದು ನನಗೆ ತಿಳಿದಿದೆ?'. ಹೌದು, ನಾನು ಮತ್ತೆ ಕೆಲಸಕ್ಕೆ ಹೋಗುತ್ತಿದ್ದೇನೆ. ಆದರೆ, ಈ ಮಧ್ಯೆ ನಾನು ಸಂಪೂರ್ಣವಾಗಿ ನಿರುದ್ಯೋಗಿಯಾಗಿದ್ದೆ" ಎಂದು ತಿಳಿಸಿದರು.
ಅಲ್ಲದೇ, ಸಮಂತಾ ಪಾಡ್‌ಕಾಸ್ಟ್ ಬಗ್ಗೆಯೂ ಮಾತನಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ತನ್ನ ಪ್ರೊಡಕ್ಷನ್ ಬ್ಯಾನರ್ ಘೋಷಿಸಿರುವ ನಟಿ, ಕೆಲಸಕ್ಕೆ ಮರಳುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದರು. ಇದರ ಜೊತೆಗೆ ಪಾಡ್‌ಕಾಸ್ಟ್ ಬಗ್ಗೆಯೂ ಸುಳಿವು ನೀಡಿದರು.