ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರಿಗಿಂದು ಜನ್ಮದಿನದ ಸಂಭ್ರಮ. 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದಕ್ಷಿಣ ಚಿತ್ರರಂಗದ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟಿ ಕೂಡ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸರ್ಪೈಸ್ ಕೊಟ್ಟಿದ್ದಾರೆ.
ನಟಿಯ ಹೊಸ ಚಿತ್ರ 'ಬಂಗಾರಂ' ಘೋಷಣೆಯಾಗಿದೆ. ಇದು ಜನಪ್ರಿಯ ನಟಿಯ ಚೊಚ್ಚಲ ನಿರ್ಮಾಣದ ಚಿತ್ರ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಘೋಷಣೆ ಮಾಡುವುದರ ಜೊತೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನೂ ಅನಾವರಣಗೊಳಿಸಿದರು. ಆಸಕ್ತಿದಾಯಕ ಸಿನಿಮಾಗಳನ್ನು ಆಯ್ದುಕೊಳ್ಳುವಲ್ಲಿ ಹೆಸರುವಾಸಿಯಾಗಿರುವ ಸಮಂತಾ, ನಟಿಯಾಗಿ ಈಗಾಗಲೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ಉತ್ತಮ ನಟನೆಯಿಂದ ಛಾಪು ಮೂಡಿಸಿರುವ ಅಭಿನೇತ್ರಿ ಇದೀಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
'ಬಂಗಾರಂ' ಫಸ್ಟ್ ಲುಕ್ ಪೋಸ್ಟರ್, ಸಮಂತಾ ನಿರ್ಭೀತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಭರವಸೆ ನೀಡಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಅನಾವರಣಗೊಂಡಿದ್ದು, ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂಬುದನ್ನು ಸಮಂತಾ ಬಹಿರಂಗಪಡಿಸಿದ್ದಾರೆ. ಇದು ನಟಿ ಬಂಡವಾಳ ಹೂಡುತ್ತಿರುವ ಚೊಚ್ಚಲ ಚಿತ್ರವಾದ ಹಿನ್ನೆಲೆ ಸಾಕಷ್ಟು ನಿರೀಕ್ಷೆಗಳಿವೆ. ಖ್ಯಾತ ನಟಿ ನಟಿಸಿ, ನಿರ್ಮಾಣ ಮಾಡಲಿರುವ ಈ ಚಿತ್ರದ ನಿರ್ದೇಶಕರು ಯಾರು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಸಮಂತಾ ರುತ್ ಪ್ರಭು ತಮ್ಮ ಹುಟ್ಟುಹಬ್ಬದಂದು ಹೊಸ ಪ್ರೊಜೆಕ್ಟ್ ಘೋಷಿಸುತ್ತಿದ್ದಂತೆ, ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಅಭಿನಂದನೆ ತಿಳಿಸಿದ್ದಾರೆ. ನಟಿ ಹಂಚಿಕೊಂಡಿರುವ ಪೋಸ್ಟರ್ನಲ್ಲಿ, ಉಗ್ರ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖದ ಮೇಲೆ ರಕ್ತದ ಕಲೆಗಳಿದ್ದು, ಕಣ್ಣೇ ಯಾರನ್ನೋ ಸುಡುವಂತಿದೆ. ಹೊಸ ಸಿನಿಮಾ ಘೋಷಣೆ, ನಿರ್ಮಾಪಕಿಯಾಗಲಿರುವ ವಿಚಾರ, ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಳ್ಳುವುದರೊಂದಿಗೆ ನಟಿಯ ಜನ್ಮದಿನದ ಸಂಭ್ರಮ ದ್ವಿಗುಣಗೊಂಡಿದೆ.