ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರಿಡದ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸಾಜಿದ್ ಕೊನೆಯದಾಗಿ 2014ರಲ್ಲಿ ತೆರೆಕಂಡ 'ಕಿಕ್' ನಿರ್ಮಾಣದ ಜೊತೆಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಸಖತ್ ಸೌಂಡ್ ಮಾಡಿತ್ತು. ಅದಕ್ಕೂ ಮುನ್ನ ಜೀತ್, ಜುಡ್ವಾ, ಹರ್ ದಿಲ್ ಜೋ ಪ್ಯಾರ್ ಕರೇಗಾ, ಮುಜ್ಸೆ ಶಾದಿ ಕರೋಗಿ ಇವರದೇ ಕಾಂಬೋದಲ್ಲಿ ಮೂಡಿಬಂದ ಸೂಪರ್ ಹಿಟ್ ಚಿತ್ರಗಳಾಗಿವೆ. ಇದೀಗ ದಶಕದ ನಂತರ ಮತ್ತೆ ಒಂದಾಗುತ್ತಿದ್ದಾರೆ.
400 ಕೋಟಿ ರೂಪಾಯಿಗಳ ಬಿಗ್ ಬಜೆಟ್ನೊಂದಿಗೆ ಈ ಚಿತ್ರ ಸಿದ್ಧಗೊಳ್ಳಲಿದೆ. 2025ರ ಈದ್ ಹಬ್ಬಕ್ಕೆ ತೆರೆಗೆ ಬರಲಿದೆ. ಸಾಜಿದ್ ಮತ್ತು ಮುರುಗದಾಸ್ ಚಿತ್ರದ ಬಗ್ಗೆ ಈಗಾಗಲೇ ಚರ್ಚಿಸಿದ್ದು ಸಲ್ಮಾನ್ ಖಾನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಚಿತ್ರವು ಆ್ಯಕ್ಷನ್ ಎಂಟರ್ಟೈನರ್ ಆಗಿರಲಿದೆ ಎಂದು ಹೇಳಲಾಗುತ್ತದೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಪೋರ್ಚುಗಲ್ ಮತ್ತು ಇತರ ಯುರೋಪಿಯನ್ ದೇಶಗಳಲ್ಲಿ ಚಿತ್ರೀಕರಿಸಲಾಗುತ್ತದೆಯಂತೆ. ಕೆಲವು ಭಾಗಗಳನ್ನು ಭಾರತದಲ್ಲಿಯೂ ಚಿತ್ರೀಕರಿಸುವ ಪ್ಲಾನ್ ಮಾಡಿಕೊಂಡಿದ್ದಾರಂತೆ. ಇದು ಸಾಜಿದ್ ಅವರ ವೃತ್ತಿ ಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಲಿದೆ.