ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶಿ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ನನ್ನು ಇಂದು ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ಪೂರ್ಣಗೊಂಡಿದೆ ಎಂದು ತೋರುತ್ತಿದೆ, ಹೆಚ್ಚಿನ ಕಸ್ಟಡಿಗೆ ಯಾವುದೇ ಹೊಸ ಕಾರಣಗಳಿಲ್ಲ ಎಂದು ಹೇಳಿ ಆರೋಪಿಯ ಪೊಲೀಸ್ ಕಸ್ಟಡಿಯನ್ನು ಎರಡು ದಿನಗಳ ಕಾಲ ವಿಸ್ತರಿಸುವಂತೆ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೊತೆಗೆ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ ಭಾನುವಾರ ಮುಂಬೈನ ಥಾಣೆ ನಗರದಲ್ಲಿ ಅರೆಸ್ಟ್ ಆದ ಆರೋಪಿಯು ವಿಜಯ್ ದಾಸ್ ಎಂದು ತನ್ನ ಗುರುತನ್ನು ಬದಲಾಯಿಸಿಕೊಂಡು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ವರದಿಯಾಗಿದೆ. ಜನವರಿ 16ರ ಮುಂಜಾನೆ ಬಾಂದ್ರಾದ ಅಪಾರ್ಟ್ಮೆಂಟ್ ಒಂದರಲ್ಲಿರುವ ಸೈಫ್ ಅಲಿ ಖಾನ್ ಅವರ 12ನೇ ಮಹಡಿಯ ನಿವಾಸಕ್ಕೆ ನುಗ್ಗಿದ್ದ ಆರೋಪಿ ನಟನಿಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
54ರ ಹರೆಯದ ನಟನನ್ನು ಆ ಕೂಡಲೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು. ಐದು ದಿನಗಳ ನಂತರ ನಟನನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಮಾಧ್ಯಮಗೋಷ್ಟಿ ನಡೆಸಿ, ಬಂಧಿತ ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ತಿಳಿಸಿದ್ದರು.