'ಕೆಂಡ', ಕನ್ನಡ ಚಿತ್ರರಂಗದಲ್ಲಿ ಹಲವು ವಿಚಾರಗಳಿಂದ ಸುದ್ದಿಯಲ್ಲಿರುವ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕ ಸಹದೇವ್ ಕೆಲವಡಿ ಪಾಲಿಗೆ ರೋಮಾಂಚಕ ಗೆಲುವು ಸಿಕ್ಕಿದೆ. ಸಿನಿಮಾ ಇನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ಗೆ ಪ್ರವೇಶ ಪಡೆದಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಂದು ಸಂಭ್ರಮದ ಸಂಗತಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಹೌದು, ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ - ಜ್ಯೂರಿ ಅವಾರ್ಡ್ ಲಭಿಸಿದೆ. ಈ ಮೂಲಕ ಮೊದಲ ಪ್ರಯತ್ನದಲ್ಲಿಯೇ ತಮ್ಮ ನಿರ್ದೇಶನದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
14ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್ - 24ಕ್ಕೆ 'ಕೆಂಡ' ಪ್ರವೇಶ ಪಡೆದುಕೊಂಡಿತ್ತು. ಈ ಹಂತದಲ್ಲಿ ಅತ್ಯಂತ ಕ್ಲಿಷ್ಟಕರ ಸ್ಪರ್ಧೆಯನ್ನು ದಾಟಿಕೊಂಡಿದ್ದ ಕೆಂಡ ಚಿತ್ರ ಕಡೆಗೂ ಅತ್ಯುತ್ತಮ ಚೊಚ್ಚಲ ನಿರ್ದೇಶನ ವಿಭಾಗದ ಜ್ಯೂರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸುತ್ತಿನಲ್ಲಿ ನಾನಾ ಭಾಷೆಗಳ ಚಿತ್ರಗಳ ನಡುವೆ ಕನ್ನಡ ಚಿತ್ರ ಸ್ಪರ್ಧೆಗೆ ಒಡ್ಡಿಕೊಂಡಿತ್ತು. ಅಂತಿಮವಾಗಿ ಪ್ರತಿಷ್ಟಿತ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಚಿತ್ರತಂಡ ಗೆಲುವಿನ ನಗೆ ಬೀರಿದೆ.
ಈ ಫಿಲ್ಮ್ ಫೆಸ್ಟಿವಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘನತೆ ಉಳಿಸಿಕೊಂಡಿದೆ. ಇದಕ್ಕೆ ಪ್ರವೇಶ ಪಡೆದುಕೊಳ್ಳೋದೇ ದೊಡ್ಡ ಸಂಗತಿ ಎಂಬ ವಾತಾವರಣವಿದೆ. ಹಾಗೊಂದು ವೇಳೆ ಪ್ರವೇಶ ಸಿಕ್ಕರೂ ಕೂಡಾ ಸ್ಪರ್ಧೆಯಲ್ಲಿ ಉಳಿದುಕೊಳ್ಳುವುದು ಸಾಮಾನ್ಯ ಸಂಗತಿಯ ಅಲ್ಲವೇ ಅಲ್ಲ. ಅದೆಲ್ಲವನ್ನೂ ದಾಟಿಕೊಂಡು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರೋದೇ ಕೆಂಡದ ಸಾಧನೆ. ಅದರಲ್ಲೂ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಹದೇವ್ ಕೆಲವಡಿ ಅಚ್ಚರಿ ಮೂಡಿಸಿದ್ದಾರೆ.