ಕರ್ನಾಟಕ

karnataka

ETV Bharat / entertainment

'ಸಾಮ್ರಾಟ್ ಮಾಂಧಾತ' ಟ್ರೇಲರ್​ ಮೆಚ್ಚಿದ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ - ಹೇಮಂತ್ ಕುಮಾರ್

Saamraat Maandhatha: ಹೇಮಂತ್ ಕುಮಾರ್ ನಿರ್ದೇಶನದ 'ಸಾಮ್ರಾಟ್ ಮಾಂಧಾತ' ಟ್ರೇಲರ್​ ಅನಾವರಣಗೊಂಡಿದೆ.

Saamraat Maandhatha
'ಸಾಮ್ರಾಟ್ ಮಾಂಧಾತ' ಚಿತ್ರತಂಡ

By ETV Bharat Karnataka Team

Published : Feb 27, 2024, 3:19 PM IST

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್​​ವುಡ್​ನಲ್ಲಿ ಭಕ್ತಿಪ್ರಧಾನ ಮತ್ತು ಪೌರಾಣಿಕ ಚಿತ್ರಗಳ ನಿರ್ಮಾಣ ಕಡಿಮೆಯಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಈ ಹೊತ್ತಿನಲ್ಲಿ, ಕೆಲ ನಿರ್ದೇಶಕರು-ನಿರ್ಮಾಪಕರು ಪೌರಾಣಿಕ ಚಿತ್ರಗಳನ್ನು ನಿರ್ಮಾಣ ಮಾಡುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಯುವ ನಿರ್ದೇಶಕ ಹೇಮಂತ್ ಕುಮಾರ್ ಎಂಬುವರು ಸೂರ್ಯವಂಶದ ಸಾಮ್ರಾಟ್ ಮಾಂಧಾತನ ಕಥೆಯನ್ನಾಧರಿಸಿದ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.

'ಸಾಮ್ರಾಟ್ ಮಾಂಧಾತ' ಚಿತ್ರತಂಡ

ಸದ್ದಿಲ್ಲದೇ ಶೂಟಿಂಗ್​​ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗಿರೋ 'ಸಾಮ್ರಾಟ್ ಮಾಂಧಾತ' ಚಿತ್ರದ ಟ್ರೇಲರ್​ ಅನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅನಾವರಣ ಮಾಡಿ, ಮೆಚ್ಚುಗೆ ಸೂಚಿಸಿದರು. ಇಕ್ಷ್ವಾಕು ವಂಶದ (ಸೂರ್ಯವಂಶ) ಯವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ ಸತ್ಯ ಮತ್ತು ಧರ್ಮದ ಆಡಳಿತದಿಂದಲೇ ಪ್ರಖ್ಯಾತಿ ಗಳಿಸಿದ್ದನು. ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತದೆ. ಈ ಮಾಂಧಾತರ ಕಥೆಯನ್ನು ಸಾಮ್ರಾಟ್ ಮಾಂಧಾತ ಚಿತ್ರದ ಮೂಲಕ ಹೇಮಂತ್ ಹೇಳಲು ಹೊರಟಿದ್ದಾರೆ.

'ಸಾಮ್ರಾಟ್ ಮಾಂಧಾತ' ಚಿತ್ರತಂಡ

ಟ್ರೇಲರ್​ ರಿಲೀಸ್​ ಈವೆಂಟ್​​ನಲ್ಲಿ ಮಾತನಾಡಿದ ಓಂ ಸಾಯಿ ಪ್ರಕಾಶ್, ಆಗಿನ ಕಾಲದಲ್ಲಿ ಕಥೆ ಬರೆಯಲು 6 ತಿಂಗಳು ಅಥವಾ ವರ್ಷ ಕಷ್ಟಪಡುತ್ತಿದ್ದೆವು. ಒಳ್ಳೆಯ ಕಂಟೆಂಟ್ ಇಟ್ಟುಕೊಂಡು ಮಾಡಿದ ಯಾವುದೇ ಸಿನಿಮಾ ಯಶಸ್ವಿಯಾಗುತ್ತವೆ. ಅದೇ ರೀತಿ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಹಾರೈಸಿದರು.

'ಸಾಮ್ರಾಟ್ ಮಾಂಧಾತ' ಚಿತ್ರತಂಡ

ಇದನ್ನೂ ಓದಿ:ವಿಜಯ್​​ ದೇವರಕೊಂಡ ಜೊತೆಗಿನ ಡೇಟಿಂಗ್​ ವದಂತಿಗೆ ತುಪ್ಪ ಸುರಿದರಾ ರಶ್ಮಿಕಾ?

ನಿರ್ದೇಶಕ-ನಿರ್ಮಾಪಕ ಹೇಮಂತ್ ಕುಮಾರ್ ಮಾತನಾಡಿ, ಇದು ಪೌರಾಣಿಕ ಚಿತ್ರ. ಇದರಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರು. ಐದಾರು ತಿಂಗಳವರೆಗೆ ಎಲ್ಲರಿಗೂ ತರಬೇತಿ ನೀಡಿದ ನಂತರ ಕ್ಯಾಮರಾ ಮುಂದೆ ಅಭಿನಯಿಸಿದ್ದಾರೆ. ಕೋವಿಡ್​​ ಸಮಯದಲ್ಲಿ ಚಿತ್ರೀಕರಣ ಆರಂಭಿಸಿದ್ದೆವು. ವಿಎಫ್‍ಎಕ್ಸ್ ಜಾಸ್ತಿ ಇರೋ ಹಿನ್ನೆಲೆ ಚಿತ್ರ ಮೂರು ವರ್ಷ ತೆಗೆದುಕೊಂಡಿತು. ಮುಂದಿನವಾರ ಸೆನ್ಸಾರ್​ಗೆ ಅಪ್ಲೈ ಮಾಡಿ, ಏಪ್ರಿಲ್‍ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ. ತ್ರೇತಾಯುಗದ ಆದಿಭಾಗದಲ್ಲಿ, ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ ಶನಿ ಮಹಾತ್ಮನ ಮೊರೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಶನಿ‌ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಸಾಮ್ರಾಟ್ ಮಾಂಧಾತ ಎಂದು ತಿಳಿಸಿದರು.

ಇದನ್ನೂ ಓದಿ:ಶುಕ್ರವಾರ ತೆರೆಗಪ್ಪಳಿಸಲಿದೆ ದೇವದಾಸ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ

ಚಿತ್ರದಲ್ಲಿ ಮಾಂಧಾತನಾಗಿ ನಟಿಸಿರುವ ಬಸವರಾಜು ಅವರು ನಾಟಕದಲ್ಲೂ ಸಹ ಅದೇ ಪಾತ್ರ ಮಾಡಿ ಗುರುತಿಸಿಕೊಂಡವರು. ಉಳಿದಂತೆ ಶನಿದೇವನಾಗಿ ಸುಂದರಬಾಬು, ಬಿಂದುಮತಿಯಾಗಿ ಭಾರತಿ, ನಾರದನಾಗಿ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿ ಮಂಜುನಾಥ ಕಾಣಿಸಿಕೊಂಡಿದ್ದಾರೆ. ಕಲಾನಿರ್ದೇಶಕನಾಗಿ ರವಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ - ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ. ಹೇಮಂತ್ ಪ್ರೊಡಕ್ಷನ್ಸ್​​ನಿಂದ ನಿರ್ಮಾಣ ಆಗಿರುವ ಸಾಮ್ರಾಟ್ ಮಾಂಧಾತ ಏಪ್ರಿಲ್‍ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ABOUT THE AUTHOR

...view details