ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟ ರಿಷಬ್ ಶೆಟ್ಟಿ. ಈ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿದ್ದಾರೆ. ಜೊತೆಗೆ ಡಿವೈನ್ ಸ್ಟಾರ್ ಈಗ ಕನ್ನಡ ಚಿತ್ರಗಳು ಮಾತ್ರ ಅಲ್ಲದೇ ಪರಭಾಷೆಯ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ತೆಲುಗಿನ ಹನುಮಾನ್ ಸೀಕ್ವೆಲ್ನಲ್ಲಿ ಹನುಮಂತನ ಪಾತ್ರ ಮಾಡುತ್ತಿದ್ದು, ಅವರ ಫಸ್ಟ್ ಲುಕ್ ಇತ್ತೀಚೆಗೆ ಅನಾವರಣಗೊಂಡಿತ್ತು. ಸದ್ಯ ರಿಷಬ್ ಶೆಟ್ಟಿ ಕಾಂತಾರ ಅಧ್ಯಾಯ 1 ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ಅದ್ಧೂರಿ ಸೆಟ್ಗಳನ್ನ ಹಾಕಿ ಚಿತ್ರೀಕರಣ ಮಾಡುತ್ತಿದ್ದಾರೆ. ಇದೀಗ ಕಾಂತಾರ ಅಧ್ಯಾಯ 1 ಸಿನಿಮಾ ಟೀಮ್ಗೆ RRR ಚಿತ್ರದ ಆಕ್ಷನ್ ಡೈರೆಕ್ಟರ್ ಸೇರಿದ್ದಾರೆ.
ಕಾಂತಾರ ಅಧ್ಯಾಯ 1 ಚಿತ್ರದ ಮೋಷನ್ ಪಿಕ್ಚರ್ ಜೊತೆ ರಿಷಬ್ ಶೆಟ್ಟಿ ಫಸ್ಟ್ ಲುಕ್ ಭಾರತೀಯ ಸಿನಿಮಾದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿತ್ತು. ಇದಕ್ಕಾಗಿ ರಿಷಬ್ ಶೆಟ್ಟಿ ಆರು ತಿಂಗಳ ಕಾಲ ಕಥೆ ಮಾಡಿ ಸರಳವಾಗಿ ಮುಹೂರ್ತ ಮಾಡಿ ಶೂಟಿಂಗ್ ಆರಂಭಿಸಿದ್ದರು. ಈ ಚಿತ್ರಕ್ಕೆ 10ಕೆಜಿ ತೂಕ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಮಾಡಲಿದ್ದಾರೆ. ಅದಕ್ಕಾಗಿಯೇ ಶೆಟ್ರು ಕಲರಿಪಯಟ್ಟು ಕಲಿಯುತ್ತಿರುವ ಫೋಟೋವನ್ನ ರಿವೀಲ್ ಮಾಡಿದ್ದರು.
RRR ಸಿನಿಮಾದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್, ಇದೀಗ ಕಾಂತಾರ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ. ಆ ನಿಮಿತ್ತ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಅವರು ಆಗಮಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಸಿದ್ಧತೆ ಮಾಡಿಕೊಂಡಿರುವ ಆರ್ ಆರ್ ಆರ್ ಚಿತ್ರದ ಸ್ಟಂಟ್ ಮಾಸ್ಟರ್ ಟೊಡರ್ ಲ್ಯಾಜರೋವ್ ಕಲರಿಪಯಟ್ಟು ಆಕ್ಷನ್ ಕಂಪೋಜ್ ಮಾಡಲಿದ್ದಾರೆ.