ಮುಂಬೈ (ಮಹಾರಾಷ್ಟ್ರ):ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಸೆಪ್ಟೆಂಬರ್ 25, ಬುಧವಾರ ರಾತ್ರಿ ಮುಂಬೈ ನಗರದಲ್ಲಿ ಕಾಣಿಸಿಕೊಂಡರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಹ್ಯಾಡ್ಸಂ ಹೀರೋ ಜೊತೆ ಪತ್ನಿ ರಾಧಿಕಾ ಪಂಡಿತ್ ಕೂಡಾ ಇದ್ದರು.
ಜನಪ್ರಿಯ ತಾರಾ ದಂಪತಿ ಮುಂಬೈನಲ್ಲಿ ಭೋಜನವನ್ನು ಸವಿದಿದ್ದಾರೆ. ಬಾಂದ್ರಾದ ಐಷಾರಾಮಿ ರೆಸ್ಟೋರೆಂಟ್ ಹೊರಗೆ ಪ್ರೇಮಪಕ್ಷಿಗಳು ಕೈ ಕೈ ಹಿಡಿದುಕೊಂಡು ಬಂದಿದ್ದು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಬೈನಲ್ಲಿ ಯಶ್, ರಾಧಿಕಾ ಪಂಡಿತ್ (Video source: ANI) ಬುಧವಾರ ಸಂಜೆ ಮುಂಬೈ ನಗರದಲ್ಲಿ ದಕ್ಷಿಣ ಚಿತ್ರರಂಗದ ಖ್ಯಾತ ನಟನ ಉಪಸ್ಥಿತಿ ಉತ್ಸಾಭರಿತ ವಾತಾವರಣ ಸೃಷ್ಟಿಸಿತ್ತು. ಅವರ ಮುಂಬರುವ ಚಿತ್ರಗಳಾದ 'ರಾಮಾಯಣ' ಮತ್ತು 'ಟಾಕ್ಸಿಕ್' ಚಿತ್ರೀಕರಣದ ಸುತ್ತಲಿನ ಉತ್ಸಾಹ, ಕುತೂಹಲವನ್ನು ಹೆಚ್ಚಿಸಿದೆ.
ತಾರಾ ದಂಪತಿ ರೆಸ್ಟೋರೆಂಟ್‌ನಿಂದ ಹೊರಬರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಎಂದಿನಂತೆ ರಾಧಿಕಾ ಅವರ ಕೈ ಹಿಡಿದು ಯಶ್ ಮುಂದೆ ಸಾಗಿದ್ದಾರೆ. ರಾಕಿ ಭಾಯ್ ತಿಳಿ ಹಸಿರು ಬಣ್ಣದ ಪೂರ್ಣ ತೋಳಿನ ಸ್ವೆಟ್‌ಶರ್ಟ್ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಮತ್ತೊಂದೆಡೆ, ರಾಧಿಕಾ ಪಂಡಿತ್ ವೈನ್ ಕಲರ್ ಶರ್ಟ್ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳು ತಾರಾ ದಂಪತಿಯ ಚಿತ್ರಗಳನ್ನು ಕ್ಲಿಕ್ಕಿಸಲು ಮುಂದಾದಾಗ, ಅವರ ಮೊಗದಲ್ಲಿ ಮಿಲಿಯನ್ ಡಾಲರ್ ನಗು ಇತ್ತು. ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪ್ರೇಮಪಕ್ಷಿಗಳಿಗೆ ದೃಷ್ಟಿ ತಾಗದಿರಲಿ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:'ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ': ಪುನೀತ್ ದೇವಸ್ಥಾನ ಉದ್ಘಾಟಿಸಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕ - Puneeth Rajkumar Temple
ಕೆಜಿಎಫ್ ಸ್ಟಾರ್ ಎಂದೇ ಗುರುತಿಸಿಕೊಳ್ಳುವ ನಟ ಯಶ್ ಮುಂದೆ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಮತ್ತು ದಕ್ಷಿಣ ಚಿತ್ರರಂಗದ ಚೆಲುವೆ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಅರುಣ್ ಗೋವಿಲ್, ಲಾರಾ ದತ್ತಾ, ರವಿ ದುಬೆ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ವರದಿಗಳನ್ನು ಪ್ರಕಾರ ಚಿತ್ರ 2026ರಲ್ಲಿ ತೆರೆಗಪ್ಪಳಿಸಲಿದೆ.
ಇದನ್ನೂ ಓದಿ:ಎಸ್‌ಪಿ ಬಾಲಸುಬ್ರಹ್ಮಣ್ಯಂ ಜೊತೆ ಕೆಲಸ ಮಾಡುವ ಕನಸು ಕಂಡಿದ್ದ ಪುನೀತ್ ರಾಜ್‍ಕುಮಾರ್: 'ಮಾಯಾ ಬಜಾರ್'ನಲ್ಲಿ ನನಸು - Puneeth Rajkumar
ಇನ್ನು 'ಟಾಕ್ಸಿಕ್' ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ. ಆಗಸ್ಟ್ 8ರಂದು ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಚಿತ್ರೀಕರಣ ಪ್ರಾರಂಭವಾಗಿದೆ. ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಲೈಟ್ ಬಾಯ್ ಕೈಯಲ್ಲಿ ತಮ್ಮ ಪ್ಯಾನ್ ವರ್ಲ್ಡ್ ಸಿನಿಮಾದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ ರಾಕಿಂಗ್ ಸ್ಟಾರ್ ಗಮನ ಸೆಳೆದಿದ್ದರು. ಮಲಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ ಎಂದು ಹೇಳಲಾಗಿದೆ.