ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತ ಕೆಜಿಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಹೊಸ ಚಿತ್ರ 'ಬಘೀರ'. ಡಾ.ಸೂರಿ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಪೊಲೀಸ್ ಜೊತೆಗೆ ಸೂಪರ್ ಹೀರೋ ಪಾತ್ರದಲ್ಲಿ ಕನ್ನಡಿಗರ ಮನಗೆದ್ದಿದ್ದು, ಕಳೆದ ವಾರ ದೀಪಾವಳಿ ಹಬ್ಬದ ಶುಭ ಸಂದರ್ಭ ಚಿತ್ರಮಂದಿರ ಪ್ರವೇಶಿಸಿತ್ತು.
ಬಘೀರ ತೆರೆಕಂಡ ದಿನದಿಂದ ಈವರೆಗೂ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರ ಮನಸ್ಸಿಗೆ ಚಿತ್ರ ಬಹಳ ಹತ್ತಿರವಾಗಿದೆ. ಕುಟುಂಬ ಸಮೇತ ಬಂದು ಸಿನಿಮಾ ವೀಕ್ಷಿಸುತ್ತಿರುವುದು ಚಿತ್ರತಂಡದವರಲ್ಲಿ ಸಂತಸ ಮೂಡಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ನಲ್ಲಿ ಚಿತ್ರತಂಡದವರು ತಮ್ಮ ಸಂತಸವನ್ನು ಮಾತುಗಳ ಮೂಲಕ ಹಂಚಿಕೊಂಡರು.
ಬಘೀರ ಸಕ್ಸಸ್ ಸಂಭ್ರಮಾಚರಣೆಯಲ್ಲಿ ನಾಯಕ ನಟ ಶ್ರೀಮುರಳಿ, ನಿರ್ದೇಶಕ ಡಾ.ಸೂರಿ, ನಟರಾದ ಗರುಡ ರಾಮ್, ಅಚ್ಯುತ್ ಕುಮಾರ್, ರಘು ರಾಮನಕೊಪ್ಪ ಹಾಗೂ ತಂತ್ರಜ್ಞರಾದ ಕ್ಯಾಮರಾಮ್ಯಾನ್ ಎ.ಜೆ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಂಕಲನಕಾರ ಪ್ರಣವ್ ಶ್ರೀ ಪ್ರಸಾದ್ ಸೇರಿದಂತೆ ಚಿತ್ರತಂಡ ಹಾಜರಿತ್ತು.
ನಿರ್ದೇಶಕ ಡಾ.ಸೂರಿ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ (Photo Source: ETV Bharat) ಇದನ್ನೂ ಓದಿ:ಸಲ್ಮಾನ್ ಬೆನ್ನಲ್ಲೇ ಸೂಪರ್ ಸ್ಟಾರ್ ಶಾರುಖ್ ಖಾನ್ಗೂ ಕೊಲೆ ಬೆದರಿಕೆ: ಎಫ್ಐಆರ್ ದಾಖಲು
ನಟ ಶ್ರೀಮುರಳಿ ಮಾತನಾಡಿ, ''ಇದು ನನ್ನ ಮೂರು ವರ್ಷಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ. ಈ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಈ ಗೆಲುವು ಸಾಧ್ಯವಾಗಿರುವುದು. ಚಿತ್ರ ಬಿಡುಗಡೆಯಾದ ದಿನದಿಂದ ಅವರು ತೋರುತ್ತಿರುವ ಒಲವೇ ಈ ಚಿತ್ರದ ಗೆಲುವು. ಈ ಯಶಸ್ಸಿಗೆ ನಾನೊಬ್ಬ ಮಾತ್ರ ಕಾರಣನಲ್ಲ. ಇಡೀ ತಂಡದ ಶ್ರಮದಿಂದ ಈ ಯಶಸ್ಸು ದೊರಕಿದೆ. ಅದರಲ್ಲಿ ಮುಖ್ಯವಾದವರು, ಯಾವುದೇ ಕೊರತೆ ಬಾರದ ಹಾಗೆ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಪ್ರಶಾಂತ್ ನೀಲ್ ಅವರ ಕಥೆಯನ್ನು ಮನಮುಟ್ಟುವಂತೆ ನಿರ್ದೇಶಿಸಿರುವ ಡಾ.ಸೂರಿ. ಈ ಚಿತ್ರದ ಛಾಯಾಗ್ರಹಣ ಹಾಗೂ ಸಂಗೀತದ ಬಗ್ಗೆ ಕೂಡ ಉತ್ತಮ ಮಾತುಗಳು ಕೇಳಿ ಬರುತ್ತಿವೆ. ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ ಅರ್ಪಿಸುತ್ತೇನೆ. ಹತ್ತು ವರ್ಷಗಳ ಹಿಂದೆ ಸೂರಿ ಅವರ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ'' ಎಂದು ತಿಳಿಸಿದರು.
ನಿರ್ದೇಶಕ ಡಾ.ಸೂರಿ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ (Photo Source: ETV Bharat) ಇದನ್ನೂ ಓದಿ:ಬಘೀರ ಕಲೆಕ್ಷನ್: 7 ದಿನಗಳಲ್ಲಿ ಶ್ರೀಮುರಳಿ, ರುಕ್ಮಿಣಿ ವಸಂತ್ ಸಿನಿಮಾ ಗಳಿಸಿದ್ದಿಷ್ಟು
ಬಳಿಕ ನಿರ್ದೇಶಕ ಡಾ.ಸೂರಿ ಮಾತನಾಡಿ, ''ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಸಂತೋಷವಾಗಿದೆ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್ ಬಜೆಟ್ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ, "ಬಘೀರ"ನ ಪಾತ್ರಕ್ಕೆ ಜೀವ ತುಂಬಿದ ಶ್ರೀಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದಗಳು'' ಎಂದು ತಿಳಿಸಿದರು. ಹಾಗೇ ಕಲೆಕ್ಷನ್ ಅಂತಾ ಬಂದಾಗ ಬಘೀರ 18 ರಿಂದ 20 ಕೋಟಿ ರೂ. ಕಲೆಕ್ಷನ್ ಆಗಿದೆ ಅಂತಾ ನಿರ್ದೇಶಕರು ತಿಳಿಸಿದರು.