ಚೆನ್ನೈ(ತಮಿಳುನಾಡು): ಭಾರತೀಯ ಸಂಗೀತ ಕ್ಷೇತ್ರದ ಹಿರಿಯ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಆಗಸ್ಟ್ 19ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 88ರ ಹರೆಯದ ಗಾಯಕಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಗಸ್ಟ್ 17ರಂದು ಸುಶೀಲಾ ಚೆನ್ನೈನ ಕಾವೇರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ತಿಳಿದು ಅವರ ಅಭಿಮಾನಿಗಳು ಹಾಗೂ ಚಿತ್ರೋದ್ಯಮದ ಸಹುದ್ಯೋಗಿಗಳು ಚಿಂತೆಗೀಡಾಗಿದ್ದರು. ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಸೋಷಿಯಲ್ ಮೀಡಿಯಾ ಮೂಲಕವೂ ಹಾರೈಕೆಗಳನ್ನು ಕಳುಹಿಸಿದ್ದರು.
ಇದೀಗ ಮನೆಗೆ ಹಿಂದಿರುಗಿದ ಗಾಯಕಿ ವಿಡಿಯೋ ಸಂದೇಶದ ಮೂಲಕ ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. "ನಾನು ಡಿಸ್ಚಾರ್ಜ್ ಆಗಿದ್ದೇನೆ. ಆರೋಗ್ಯವಾಗಿದ್ದೇನೆ. ಸಂತೋಷವಾಗಿದ್ದೇನೆ. ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ದೇವರು ತಮ್ಮ ಮೇಲೆ ನಂಬಿಕೆ ಇಟ್ಟವರನ್ನು ಕೈಬಿಡುವುದಿಲ್ಲ. ನನಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ನರ್ಸ್ಗಳಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.