ಸ್ಯಾಂಡಲ್ವುಡ್ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಅದ ಸೂಪರ್ ಸ್ಟಾರ್ಡಮ್ ಹೊಂದಿರುವ ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಬಂದ ಸಿನಿಮಾ ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ. ಇದೀಗ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿರುವ ಬ್ಲಾಕ್‌ಬಸ್ಟರ್ 'RRR' ಚಿತ್ರದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 2012ರಲ್ಲಿ ಸೂಪರ್ ಹಿಟ್ ಆಗಿದ್ದ 'ಈಗ' ಸಿನಿಮಾ ಸುದೀಪ್ ಮತ್ತು ರಾಜಮೌಳಿ ಅವರ ಕಾಂಬಿನೇಶನ್ನಲ್ಲಿ ಬಂದಿತ್ತು ಅನ್ನೋದು ನಿಮಗೆ ತಿಳಿದಿರುವ ವಿಚಾರವೇ.
ಮ್ಯಾಕ್ಸ್ ಯಶಸ್ಸಿನ ತೂಕ ಹೆಚ್ಚಿಸಿತು ಸ್ಟಾರ್ ಡೈರೆಕ್ಟರ್ ಗುಣಗಾನ:ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆ ಗಳಿಸಿರುವ ಮ್ಯಾಕ್ಸ್ ಸಿನಿಮಾದ ಬಾಕ್ಸ್ ಆಫೀಸ್ ಪ್ರಯಾಣವೂ ಉತ್ತಮವಾಗಿದೆ. ಭಾನುವಾರ ಚಿತ್ರತಂಡ ಸಕ್ಸಸ್ ಸೆಲೆಬ್ರೇಶನ್ ಆಯೋಜಿಸಿತ್ತು. ಅಲ್ಲದೇ, ನಾಯಕ ನಟ ಕಿಚ್ಚ ಸುದೀಪ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು. ವಾರಾಂತ್ಯದ ಗಲ್ಲಾಪೆಟ್ಟಿಗೆ ವ್ಯವಹಾರವೂ ಅತ್ಯುತ್ತಮವಾಗಿದೆ. ಇದೀಗ ಸ್ಟಾರ್ ಡೈರೆಕ್ಟರ್ ಗುಣಗಾನ ಸಿನಿಮಾ ಯಶಸ್ಸಿನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಎಸ್.ಎಸ್ ರಾಜಮೌಳಿ ಟ್ವೀಟ್: ಮನರಂಜನಾ ಕ್ಷೇತ್ರಕ್ಕೆ ಹಲವು ಯಶಸ್ವಿ ಸಿನಿಮಾಗಳನ್ನು ಕೊಟ್ಟಿರುವ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ''ಮ್ಯಾಕ್ಸ್ ಸಿನಿಮಾದ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಕಿಚ್ಚ ಸುದೀಪ್ ಮತ್ತು ಚಿತ್ರ ತಂಡಕ್ಕೆ ಅಭಿನಂದನೆಗಳು. ನಿಮ್ಮ ಸ್ಟಾರ್‌ಡಮ್‌ನೊಂದಿಗೆ ಮಾಸ್ ಯಾವಾಗಲೂ ಮೇಲುಗೈ ಸಾಧಿಸುತ್ತದೆ. ಸಿನಿಮಾ ನೋಡಲು ಇನ್ನೂ ಸಮಯ ಸಿಕ್ಕಿಲ್ಲ, ಆದರೆ ಶೀಘ್ರದಲ್ಲೇ ಮ್ಯಾಕ್ಸ್ ವೀಕ್ಷಿಸಲಿದ್ದೇನೆ'' ಎಂದು ತಿಳಿಸಿದ್ದಾರೆ.