ಕಾಯುವಿಕೆ ಕೊನೆಗೊಂಡಿದೆ. ಸೌತ್ ಸಿನಿಮಾ ಇಂಡಸ್ಟ್ರಿಯ 'ಬುದ್ಧಿವಂತ' ಆ್ಯಕ್ಟರ್, ಡೈರಕ್ಟರ್ ಜನಪ್ರಿಯತೆಯ ಉಪೇಂದ್ರ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ 'ಯು ಐ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದೆ. ವಿಭಿನ್ನ ಶೀರ್ಷಿಕೆಯ ಸಿನಿಮಾ ಇಂದು, 20,12,2024ರ ಬೆಳಗ್ಗೆ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ತಮ್ಮ ಸಿನಿಮಾ ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲು ಕೂಡಾ ಎಸೆದಿದ್ದಾರೆ.
ವಿಭಿನ್ನ ಆಲೋಚನೆಯ ನಿರ್ದೇಶಕ;ಸಿನಿಮಾ ವಿಚಾರಕ್ಕೆ ಬಂದರೆ ಉಪೇಂದ್ರ ಅವರ ಯೋಚನಾ ಶೈಲಿಯೇ ವಿಭಿನ್ನ. ಸಿನಿಮಾ ನೋಡುವ, ಮಾಡುವ, ಅರ್ಥಮಾಡಿಕೊಳ್ಳುವ ಅವರ ಸಾಮರ್ಥ್ಯ ಪ್ರೇಕ್ಷಕರ ಚರ್ಚೆಯ ವಿಷಯಗಳಲ್ಲೊಂದು. ಅದರಲ್ಲೂ ಅವರೇ ನಿರ್ದೇಶಿಸಿ, ನಟಿಸಿದ್ದಾರೆ ಎಂದರೆ ಕೇಳೋದೇ ಬೇಡ. ವಿಭಿನ್ನದಲ್ಲಿ ವಿಭಿನ್ನ ಅಂತಲೇ ಹೇಳಬಹುದು. ಹೊಸ ಹೊಸ ಪ್ರಯೋಗಗಳನ್ನು ಸಿನಿಪ್ರಿಯರಿಗೆ ತಲುಪಿಸುವ ಪ್ರಯತ್ನ ರಿಯಲ್ ಸ್ಟಾರ್ನದ್ದು.
ಅದರಂತೆ ವಿಶಿಷ್ಠ ಕಥಾಹಂದರ ಹೊಂದಿರುವ ಸಿನಿಮಾ 'ಯುಐ' ಇಂದು ಬಿಡುಗಡೆ ಆಗಿದೆ. ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋ ಕುತೂಹಲ ಇದೆ. ಹೀಗಿರುವಾಗಲೇ ಸಿನಿಮಾ ನೋಡುಗನಿಗೆ ರಿಯಲ್ ಸ್ಟಾರ್ ಸವಾಲೊಂದನ್ನು ಎಸೆದಿದ್ದಾರೆ.
ಉಪ್ಪಿ ಸವಾಲೇನು?ನಟ-ನಿರ್ದೇಶಕ ಉಪೇಂದ್ರ ತಮ್ಮ ಸಿನಿಮಾ ಬಿಡುಗಡೆ ಬೆನ್ನಲ್ಲೇ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ, ''ಕಾತರದಿಂದ ಕಾಯುತ್ತಿದ್ದೇನೆ.. U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು…..'' ಬರೆದುಕೊಂಡಿದ್ದಾರೆ. ಹಾಗಾದ್ರೆ ಸಿನಿಮಾ ಹೇಗಿರಬಹುದೆನ್ನುವ ನೆಟ್ಟಿಗರ ಕುತೂಹಲ ಮತ್ತಷ್ಟು ಕೆರಳಿದೆ.