ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಮೂಡಿ ಬರುತ್ತಿವೆ. ಸಿನಿ ಪ್ರೇಮಿಗಳಲ್ಲೀಗ ಕುತೂಹಲ ಹುಟ್ಟಿಸಿರೋ ಸಿನಿಮಾ 'ರವಿಕೆ ಪ್ರಸಂಗ'. ಕಥೆ, ಟ್ರೇಲರ್ ಹಾಗು ಹಾಡುಗಳಿಂದ ಸ್ಯಾಂಡಲ್ವುಡ್ನಲ್ಲಿ ಬೇಜಾನ್ ಟಾಕ್ ಆಗುತ್ತಿರುವ 'ರವಿಕೆ ಪ್ರಸಂಗ' ಇದೇ ವಾರ ಚಿತ್ರಮಂದಿರ ಪ್ರವೇಶಿಸಲಿದೆ. ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಭಟ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರವನ್ನು ಸಂತೋಷ್ ಕೊಡೆಂಕೇರಿ ನಿರ್ದೇಶಿಸಿದ್ದು, ಇದೇ ಶುಕ್ರವಾರದಂದು ತೆರೆಗಪ್ಪಳಿಸಲಿದೆ.
ನಿರ್ದೇಶಕ ಸಂತೋಷ್ ಕೊಡೆಂಕೇರಿ ಹಾಗು ನಟಿ ಗೀತಾ ಭಾರತಿ ಭಟ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೈಸೂರು, ಮಂಡ್ಯ, ಮದ್ದೂರು, ಮಂಗಳೂರು ಅಂತಾ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಬಟ್ಟೆ ಮಳಿಗೆಗೆ ಚಿತ್ರತಂಡ ಭೇಟಿ ಕೊಟ್ಟಿದೆ. ಅಲ್ಲಿರುವ 900ಕ್ಕೂ ಹೆಚ್ಚು ಸಿಬ್ಬಂದಿ ಜೊತೆ ರವಿಕೆ ಪ್ರಸಂಗ ಚಿತ್ರಕ್ಕೂ ಬಟ್ಟೆ ಅಂಗಡಿಗಳಿಗೂ ಏನು ಸಂಬಂಧ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಕೆಲಸಗಾರರು ಕೂಡ ರವಿಕೆ ಸರಿ ಆಗಲಿಲ್ಲವೆಂದರೆ ಏನೆಲ್ಲಾ ಸಮಸ್ಯೆ ಆಗುತ್ತೆ ಎಂಬುದರ ಬಗ್ಗೆ ಮಾತನಾಡುತ್ತ, ನಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗ, ಇದೇ 16 ರಂದು ಬಿಡುಗಡೆ ಆಗಲಿರುವ ಈ ಸಿನಿಮಾವನ್ನು ವೀಕ್ಷಿಸುವುದಾಗಿಯೂ ತಿಳಿಸಿದ್ದಾರೆ. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಚಿತ್ರತಂಡ ಈ ಮಳಿಗೆಯಲ್ಲಿದ್ದು, ಸಿನಿಮಾವನ್ನು ಏಕೆ ನೋಡಬೇಕು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ.
ರವಿಕೆ ಅಂದರೆ ಬ್ಲೌಸ್ ಅನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾಹಂದರ ಹೆಣೆಯಲಾಗಿದೆ. ಹಾಸ್ಯಭರಿತವಾಗಿ, ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕ ಸಂತೋಷ್ ಕೊಡೆಂಕೇರಿ ಮಾಡಿದ್ದಾರೆ. ಸಿನಿಮಾವನ್ನು ಮಾರ್ಷ್ ಡಿಸ್ಟ್ರಿಬ್ಯುಟರ್ಸ್ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆಗೊಳಿಸಲಿದೆ. ಜೊತೆಗೆ, ವಿದೇಶದಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದಂತ ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾವಿದು.