'ರವಿ ಬೋಪಣ್ಣ' ಚಿತ್ರದ ಬಳಿಕ ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಇದೀಗ 'ಪರವಶ' ಎಂಬ ಕ್ಯಾಚೀ ಟೈಟಲ್ ಹೊಂದಿರುವ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಅಂತಿಮ ಘಟ್ಟ ತಲುಪಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಎಂದೂ ಕಾಣಿಸಿಕೊಂಡಿರದ ಪಾತ್ರ ನಿರ್ವಹಿಸಿದ್ದಾರೆ. ಅದುವೇ ಘೋಸ್ಟ್. ಈ ಪಾತ್ರದಲ್ಲಿ ರವಿಮಾಮ ಹೇಗೆ ಕಾಣಿಸಲಿದ್ದಾರೆ? ಅನ್ನೋದು ಅಭಿಮಾನಿಗಳ ಕುತೂಹಲ.
ಯುವ ನಟ ರಘು ಭಟ್ ಹಾಗೂ ನಟಿ ಸೋನಲ್ ಮೊಂತೆರೋ ಅಭಿನಯದ 'ಪರವಶ' ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈ ಹಿನ್ನೆಲೆ ಇತ್ತೀಚಿಗೆ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನ್ನು ನೆಲಮಂಗಲದ ಬಳಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಯುವ ನಿರ್ದೇಶಕ ಸುಧೀಂದ್ರ ನಾಡಿಗರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈವೆಂಟ್ನಲ್ಲಿ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದೆ.
ಪರವಶ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿರೋ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ''ಹೊಸತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಾನು ಈವರೆಗೆ ನಿರ್ವಹಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ಸುಧೀಂದ್ರ ನಾಡಿಗರ್ ಅವರ ನಿರ್ದೇಶನದ ಶೈಲಿ ವಿನೂತನವಾಗಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ'' ಎಂದು ತಿಳಿಸಿದರು.
ಯುವ ನಿರ್ದೇಶಕ ಸುಧೀಂದ್ರ ನಾಡಿಗರ್ ಮಾತನಾಡಿ, ''ರವಿಚಂದ್ರನ್ ಸರ್, ರಘು ಭಟ್, ಸೋನಲ್ ಮೊಂತೆರೋ, ಪವಿತ್ರ ಲೋಕೇಶ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ನಾಯಕ ರಘು ಭಟ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡವಳ್ಳಿ ಬರೆದಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ನಲವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲ ದಿನಗಳ ಶೂಟಿಂಗ್ ಬಾಕಿಯಿದೆ. ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರದಲ್ಲಿ ಚಿತ್ರೀಕರಣವಾಗಿದೆ'' ಎಂದು ಮಾಹಿತಿ ಹಂಚಿಕೊಂಡರು.