ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಬಾಲಿವುಡ್ನ ಬಹುಬೇಡಿಕೆಯ ತಾರೆಯರಾದ ಕತ್ರಿನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಮಹಾ ಕುಂಭಮೇಳದಲ್ಲಿ ಸೋಮವಾರ ಪವಿತ್ರ ಸ್ನಾನ ಮಾಡಿದ್ದರು. ಇವರಲ್ಲದೇ, ಖ್ಯಾತ ಕಲಾವಿದೆ ರವೀನಾ ಟಂಡನ್, ಉದಯೋನ್ಮುಖ ನಟಿ ರಾಶಾ ಥಡಾನಿ ಮತ್ತು ನಟ ಅಭಿಷೇಕ್ ಬ್ಯಾನರ್ಜಿ ಕೂಡಾ ಪ್ರಯಾಗ್‌ರಾಜ್ ತಲುಪಿ ಗಮನ ಸೆಳೆದಿದ್ದಾರೆ. ಮಹಾಕುಂಭದ ಸಂಜೆಯ ಆರತಿಯಲ್ಲಿ ಭಾಗಿಯಾದ ಕತ್ರಿನಾ, ರವೀನಾ, ರಾಶಾ ಭಜನೆಯಲ್ಲೂ ಪಾಲ್ಗೊಂಡಿದ್ದರು.
ಬಾಲಿವುಡ್ನಲ್ಲಿ ತಮ್ಮದೇ ಸ್ಟಾರ್ಡಮ್ ಹೊಂದಿರುವ ರವೀನಾ ಮಗಳು ರಾಶಾ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಕತ್ರಿನಾ ಕೈಫ್ ಅತ್ತೆ ವೀಣಾ ಕೌಶಲ್ ಜೊತೆ ಕಾಣಿಸಿಕೊಂಡರು. ಆರತಿಗೂ ಮುನ್ನ, ಕತ್ರಿನಾ ಮತ್ತು ರವೀನಾ ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಸರಸ್ವತಿ ನೇತೃತ್ವದ ಭಜನೆ-ಕೀರ್ತನೆಯಲ್ಲಿ ಭಾಗವಹಿಸಿದರು. ಅಭಿಷೇಕ್ ಬ್ಯಾನರ್ಜಿ ಕೂಡಾ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕತ್ರಿನಾ ಕೈಫ್ ಸಂತರೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮಹಾ ಕುಂಭಮೇಳಕ್ಕೆ ಸೆಲೆಬ್ರಿಟಿಗಳೂ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದು, ಸ್ವಾಮಿ ಚಿದಾನಂದ ಸರಸ್ವತಿ ಈ ಬಗ್ಗೆ ಮಾತನಾಡಿದ್ದಾರೆ. "ಮಹಾ ಕುಂಭಮೇಳವು ಪುಣ್ಯಸ್ನಾನ, ಧ್ಯಾನ ಮತ್ತು ದಾನ ಕಾರ್ಯಗಳ ಒಂದು ಸಂದರ್ಭ. ಅವರು (ಕತ್ರಿನಾ) ಪವಿತ್ರ ಸ್ನಾನ ಮಾಡಿ, ಧ್ಯಾನ ಮಾಡಿ 'ಅನ್ನದಾನ' ಮಾಡಿದರು. ಅವರು ಎಲ್ಲರಲ್ಲೂ ದೇವರನ್ನು ಕಾಣುತ್ತಾರೆ. ಅಂತಹ ನಂಬಿಕೆ ದೇಶವನ್ನು ಜೀವಂತವಾಗಿರಿಸುತ್ತದೆ. ಪ್ರಧಾನಿ ಮೋದಿಯವರ ಅಭಿಪ್ರಾಯಗಳನ್ನು ನಾನು ಬೆಂಬಲಿಸುತ್ತೇನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲವನ್ನೂ ಉತ್ತಮವಾಗಿ ಸಂಘಟಿಸಿದ್ದಾರೆ" ಎಂದು ತಿಳಿಸಿದರು.
ಇದಕ್ಕೂ ಮುನ್ನ, ಬಾಲಿವುಡ್ ಖಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇಲ್ಲಿ ಇಷ್ಟೊಂದು ಉತ್ತಮ ವ್ಯವಸ್ಥೆ ಮಾಡಿದ್ದಕ್ಕಾಗಿ ಸಿಎಂ ಯೋಗಿಜಿ ಅವರಿಗೆ ಧನ್ಯವಾದ ಹೇಳುತ್ತೇನೆ. ವ್ಯವಸ್ಥೆ ಅತ್ಯುತ್ತಮವಾಗಿವೆ ಮತ್ತು ಎಲ್ಲವೂ ತುಂಬಾ ಚೆನ್ನಾಗಿ ಸಂಘಟಿತಗೊಂಡಿದೆ" ಎಂದು ತಿಳಿಸಿದರು.