ಹೈದರಾಬಾದ್: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಡಿ ಅರೆಸ್ಟ್ ಆಗಿದ್ದರು. ಇದೀಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇವರ ಮೇಲಿದ್ದು, ಸೈಬರಾಬಾದ್ ಪೊಲೀಸರು ಗೋವಾದಲ್ಲಿ ಬಂಧಿಸಿದ್ದರು. ಶೇಕ್ ಜಾನಿ ಬಾಷಾ ಎಂಬುದು ಜಾನಿ ಮಾಸ್ಟರ್ ಅವರ ನಿಜ ಹೆಸರು.
ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಜಾನಿ ಮಾಸ್ಟರ್ ಅವರನ್ನು ಗುರುವಾರ ಗೋವಾದಲ್ಲಿ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಯ ಸ್ಥಳಾಂತರಕ್ಕೆ ಅವಕಾಶ ನೀಡಿತು. ನಂತರ ಅವರನ್ನು ನಗರಕ್ಕೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಾನಿ ಮಾಸ್ಟರ್ ಸದ್ಯ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿದ್ದಾರೆ. ತನಿಖಾಧಿಕಾರಿಗಳು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯ "ತಪ್ಪೊಪ್ಪಿಗೆ" ಹೇಳಿಕೆಯನ್ನು ಸಹ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಜಾನಿ ಮಾಸ್ಟರ್ ಪತ್ನಿ ಸುಮಲತಾ, ''ಅವರು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ನಾವು ನಮ್ಮ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ'' ಎಂದು ತಿಳಿಸಿದ್ದಾರೆ. ನೃತ್ಯ ಸಂಯೋಜಕರ ವಕೀಲರು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಸಂತ್ರಸ್ತೆ (ಮಹಿಳಾ ನೃತ್ಯ ಸಂಯೋಜಕಿ)ಯು 2020ರಲ್ಲಿ ಮುಂಬೈ ವರ್ಕ್ ಟ್ರಿಪ್ ವೇಳೆ ಜಾನಿ ಮಾಸ್ಟರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಈ ಘಟನೆಯನ್ನು ಬಹಿರಂಗಪಡಿಸಿದರೆ ತನ್ನ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕುತ್ತಾ ಕಿರುಕುಳ ನೀಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದ್ದರು.