Rank Star ಖ್ಯಾತಿಯ ಗುರುನಂದನ್ ಅವರು 'ಮಂಡಿಮನೆ ಟಾಕೀಸ್' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು, ಅದರಡಿ ಸ್ನೇಹಿತರ ಜೊತೆಗೂಡಿ ಒಂದು ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಕೆಲ ತಿಂಗಳ ಹಿಂದೆ ಕ್ಲ್ಯಾಪ್ ಮಾಡಿ ಚಾಲನೆ ನೀಡಿದ್ದರು. ಇದೀಗ ಚಿತ್ರೀಕರಣ ಅಂತಿಮ ಹಂತ ತಲುಪಿದೆ.
ಗುರುನಂದನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡ ಟೈಟಲ್ ಟೀಸರ್ ಬಿಡುಗಡೆ ಮಾಡಿ ವಿಶೇಷ ಉಡುಗೊರೆ ನೀಡಿದೆ. ಚಿತ್ರಕ್ಕೆ 'ಮಿಸ್ಟರ್ ಜಾಕ್' ಎಂಬ ಶೀರ್ಷಿಕೆ ಇಡಲಾಗಿದ್ದು, ಟೈಟಲ್ ರಿವೀಲ್ ಸಮಾರಂಭದಲ್ಲಿ ಚಿತ್ರತಂಡದವರು ಹಾಜರಿದ್ದರು.
ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಮಂತ್ ಗೌಡ ಮಾತನಾಡಿ, "ಇದು ನನ್ನ ಚೊಚ್ಚಲ ಚಿತ್ರ. ಮೊದಲು ಗುರುನಂದನ್ ಅವರಲ್ಲಿ ಕಥೆ ಹೇಳಿದೆ, ಅವರಿಗೆ ಇಷ್ಟವಾಯಿತು. ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದರು. ಇಲ್ಲಿ ನಾಯಕನ ಹೆಸರು ಜಾನಕಿರಾಮ್. ಸ್ಟ್ಯಾಂಡ್ ಅಪ್ ಕಾಮಿಡಿಯನ್ಸ್ ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗೇ ಇಲ್ಲಿ ನಾಯಕ ನಟ ಮಿಸ್ಟರ್ ಜಾಕ್ ಎಂದು ಗುರುತಿಸಿಕೊಳ್ಳುತ್ತಾನೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ" ಎಂದು ತಿಳಿಸಿದರು.
ಗುರುನಂದನ್ ಮಾತನಾಡಿ, "ಇಂದು ಟೀಸರ್ ಮತ್ತು ಟೈಟಲ್ ರಿವೀಲ್ ಮಾಡುತ್ತಾರೆ ಎಂಬುದು ನನಗೂ ಗೊತ್ತಿರಲಿಲ್ಲ. ಚಿತ್ರತಂಡ ಸರ್ಪ್ರೈಸ್ ಇದೆ ಎಂದಷ್ಟೇ ಹೇಳಿದ್ದರು. ಇದ್ಯಾವುದನ್ನೂ ನನಗೆ ತೋರಿಸಿರಲಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಈ ಟೀಸರ್ ಕೊಟ್ಟಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಕಥೆ ಕೇಳಿದಾಗ ನಾವೇ ನಿರ್ಮಾಣ ಮಾಡಬೇಕು ಅಂತನಿಸಿತ್ತು. ಅಷ್ಷೊಂದು ಚೆನ್ನಾಗಿತ್ತು ಈ ಕಥೆ. ಇದುವರೆಗೂ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಬಗ್ಗೆ ಕನ್ನಡದಲ್ಲಿ ಯಾರೊಬ್ಬರೂ ಚಿತ್ರ ಮಾಡಿರಲಿಲ್ಲ. ಅಂಥದ್ದೊಂದು ಪ್ರಯತ್ನವನ್ನು ನಾವು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ನಮ್ಮ ಸ್ನೇಹಿತರೆಲ್ಲರೂ ಸಹ ನಿರ್ಮಾಪಕರಾಗಿ ಕೈ ಜೋಡಿಸಿದರು. ಹಾಗೇ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಶೇ.75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ. ಒಂದು ಹಾಡು ಹೊರತುಪಡಿಸಿದರೆ, ಜನವರಿಯಲ್ಲಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಮುಗಿಯಲಿದೆ. ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ" ಎಂದರು.