'ಬಾಹುಬಲಿ' ಖ್ಯಾತಿಯ ಪ್ರಭಾಸ್ ಅವರ ಸಂಭಾವ್ಯ ವಿವಾಹದ ಸುದ್ದಿ ಮತ್ತೆ ಸದ್ದು ಮಾಡತೊಡಗಿದೆ. 45ರ ಹರೆಯದ ನಟನ ಮದುವೆ ಸುತ್ತಲಿನ ಉತ್ಸಾಹ ಬಹಳಾನೇ ಇದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರೇಮಿಗಳು ಪ್ಯಾನ್ ಇಂಡಿಯಾ ಸ್ಟಾರ್ನ ಮದುವೆ ಕುರಿತಾದ ಅಧಿಕೃತ ಘೋಷಣೆಗಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ. ಆ ಅದೃಷ್ಟಶಾಲಿ ವಧು ಯಾರು? ಎಂದು ಊಹಿಸುತ್ತಿದ್ದಾರೆ. ಆಗಾಗ್ಗೆ ಸದ್ದು ಮಾಡುವ ಮದುವೆ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಪ್ರಭಾಸ್ ಭವಿಷ್ಯದ ಸಂಗಾತಿ ಬಗ್ಗೆ ವಿವಿಧ ವದಂತಿಗಳು ಮತ್ತು ಊಹಾಪೋಹಗಳು ಹುಟ್ಟಿಕೊಂಡಿವೆ.
ಸಲಾರ್ ಸ್ಟಾರ್ನ ಆಪ್ತ ಸ್ನೇಹಿತ ಮತ್ತು ಗೇಮ್ ಚೇಂಜರ್ ಸಲುವಾಗಿ ಸದ್ದು ಮಾಡುತ್ತಿರುವ ನಟ ರಾಮ್ ಚರಣ್, ಜನಪ್ರಿಯ ಟಾಕ್ ಶೋ ಅನ್‌ಸ್ಟಾಪಬಲ್‌ನಲ್ಲಿ ಪ್ರಭಾಸ್ ಅವರ ಮದುವೆ ಸುಳಿವು ನೀಡಿದ್ದಾರೆ. ಕಾರ್ಯಕ್ರಮದಲ್ಲಿ, ನಟ ನಂದಮೂರಿ ಬಾಲಕೃಷ್ಣ ಅವರು ಪ್ರಭಾಸ್ ಅವರ ಮದುವೆ ಬಗ್ಗೆ ಗೇಮ್ ಚೇಂಜರ್ ನಟನ ಬಳಿ ವಿಚಾರಿಸಿದಾಗ, ರಾಮ್ ಚರಣ್ಗೆ ತಮ್ಮ ನಗು ತಡೆಯಲು ಸಾಧ್ಯವಾಗಲಿಲ್ಲ. ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಆಂಧ್ರಪ್ರದೇಶದ ಗಣಪವರಂನ ಹುಡುಗಿಯನ್ನು ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ತಮಾಷೆಯಾಗಿ ತಿಳಿಸಿದರು.
ಪೂರ್ಣ ಸಂಚಿಕೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ರಾಮ್ ಚರಣ್ ಅವರ ಈ ಸುಳಿವು ನೆಟ್ಟಿಗರ ಕುತೂಹಲ ಕೆರಳಿಸಿದೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ಸ್ಟೇಟ್ಮೆಂಟ್ನ ಸತ್ಯಾನುಸತ್ಯತೆ ಕುರಿತು ಚರ್ಚೆ ನಡೆಯುತ್ತಿದೆ. ಪ್ರಭಾಸ್ ಅವರ ಭವಿಷ್ಯದ ವಧುವಿನ ಬಗ್ಗೆ ಮತ್ತಷ್ಟು ಊಹಾಪೋಹಗಳೆದ್ದಿವೆ. ಮದುವೆಯ ವದಂತಿಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆ, ಹಾಗೂ ಆಪ್ತ ಸ್ನೇಹಿತರು ಮತ್ತು ಸಿನಿಗಣ್ಯರು ಸಂಭಾವ್ಯ ಮದುವೆ ಬಗ್ಗೆ ಸುಳಿವು ನೀಡುತ್ತಿರುವುದರಿಂದ ಅಭಿಮಾನಿಗಳು ಹೆಚ್ಚಿನ ವಿವರಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.