2022ರ ಬ್ಲಾಕ್ಬಸ್ಟರ್ ಸಿನಿಮಾ 'ಆರ್ಆರ್ಆರ್' ಮೂಲಕ ಜಗತ್ತಿನಾದ್ಯಂತ ಜನಪ್ರಿಯತೆ ಸಂಪಾದಿಸಿರುವ ಸೌತ್ ಸೂಪರ್ ಸ್ಟಾರ್ ರಾಮ್ಚರಣ್ ಸದ್ಯ 'ಗೇಮ್ ಚೇಂಜರ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಹುಬೇಡಿಕೆ ತಾರೆ ಮುಂದಿನ ಚಿತ್ರ 'ಆರ್ಸಿ 16'. ಇದು ತಾತ್ಕಾಲಿಕ ಶೀರ್ಷಿಕೆಯಷ್ಟೇ. ಈ ಚಿತ್ರಕ್ಕೆ 'ಪೆದ್ದಿ' (Peddi) ಎಂದು ಹೆಸರಿಡುವ ಸಾಧ್ಯತೆಗಳಿದ್ದು, ಅಧಿಕೃತ ಮಾಹಿತಿ ಶೀಘ್ರವೇ ಹೊರ ಬೀಳಲಿದೆ.
ಉಪ್ಪೇನಾ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನದ 'ಆರ್ಸಿ 16' ಸುತ್ತ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ. ಆದರೆ, ಚಿತ್ರ ತಯಾರಕರಿನ್ನೂ ಈ ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳು 'RC16'ರ ಅಧಿಕೃತ ಶೀರ್ಷಿಕೆ ಏನೆಂದು ತಿಳಿಯಲು ಕಾತರರಾಗಿದ್ದಾರೆ. ಚಿತ್ರದ ಸುತ್ತಲಿರುವ ಸದ್ಯದ ಮಾಹಿತಿ ಪ್ರಕಾರ, ಚಿತ್ರಕ್ಕೆ ಪೆದ್ದಿ ಎಂದು ಹೆಸರಿಸಲು ಯೋಜಿಸಿದ್ದಾರಂತೆ. ಯಾವುದಕ್ಕೂ ಅಧಿಕೃತ ಮಾಹಿತಿ ಬರಬೇಕಿದೆ.
ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ಕೂಡ 'ಪೆದ್ದಿ' ಶೀರ್ಷಿಕೆ ಚಿತ್ರತಂಡಕ್ಕೆ ಹಿಡಿಸಿದೆಯಂತೆ. ಇತರ ಸಂಭವನೀಯ ಶೀರ್ಷಿಕೆಗಳ ಕಡೆಗೂ ಗಮನ ಹರಿಸಿದ್ದಾರೆ. ಅದಾಗ್ಯೂ, ಪೆದ್ದಿ 'RC16'ರ ಅಧಿಕೃತ ಶೀರ್ಷಿಕೆಯಾಗೋ ಸಾಧ್ಯತೆಗಳು ಹೆಚ್ಚಿವೆ. ಈ ಮೊದಲೇ ವರದಿ ಮಾಡಿದಂತೆ, ಇದೇ ಮಾರ್ಚ್ 20ರಂದು ಪೂಜಾ ಸಮಾರಂಭದೊಂದಿಗೆ ಈ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಬಳಿಕ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬಹುದು. ಈ ಚಿತ್ರ ಸ್ಪೋರ್ಟ್ಸ್ ಡ್ರಾಮಾ ಆಗಲಿದೆ ಅನ್ನೋದಷ್ಟೇ ಸದ್ಯಕ್ಕಿರುವ ಮಾಹಿತಿ.