ಟೆಲ್ ಅವೀವ್: ಹಮಾಸ್ನೊಂದಿಗೆ ಕದನ ವಿರಾಮ ಮಾಡಿಕೊಂಡಿರುವುದನ್ನು ವಿರೋಧಿಸಿ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್-ಗ್ವೀರ್ ಭಾನುವಾರ ರಾಜೀನಾಮೆ ಸಲ್ಲಿಸಿದ್ದು, ಅವರ ಪಕ್ಷವು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದೆ. ಇದರಿಂದ ಸಂಸತ್ತಿನಲ್ಲಿ ನೆತನ್ಯಾಹು ಸರ್ಕಾರದ ಬಹುಮತವು ಕೂದಲೆಳೆ ಅಂತರಕ್ಕೆ ಬಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕದನ ವಿರಾಮ ಮಾಡಿಕೊಂಡಿರುವುದು ಅಪಾಯಕಾರಿ ಮತ್ತು ಇದು ಭಯೋತ್ಪಾದನೆಗೆ ಶರಣಾಗತಿಯನ್ನು ಸೂಚಿಸುವ ಒಪ್ಪಂದವಾಗಿದೆ ಎಂದು ಬೆನ್-ಗ್ವೀರ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಯುದ್ಧ ನಿಲ್ಲಿಸುವುದು, ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಇಸ್ರೇಲಿಗಳ ವಿರುದ್ಧದ ದಾಳಿ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಯನ್ನು ತಾವು ವಿರೋಧಿಸುವುದಾಗಿ ಬೆನ್-ಗ್ವೀರ್ ಹೇಳಿದರು. ಇದಲ್ಲದೆ ಸ್ಥಳಾಂತರಗೊಂಡ ಪ್ಯಾಲೆಸ್ಟೈನಿಯರು ಉತ್ತರ ಗಾಜಾದಲ್ಲಿನ ತಮ್ಮ ಮನೆಗಳಿಗೆ ಮರಳಲು ಇಸ್ರೇಲ್ ಒಪ್ಪಂದದಲ್ಲಿ ಅವಕಾಶ ನೀಡಿದ್ದನ್ನೂ ವಿರೋಧಿಸುವುದಾಗಿ ಅವರು ತಿಳಿಸಿದ್ದಾರೆ.
ಒಂದೊಮ್ಮೆ ಇಸ್ರೇಲ್ ಹಮಾಸ್ ವಿರುದ್ಧದ ಯುದ್ಧವನ್ನು ಪುನಾರಂಭಿಸಿದರೆ ತಮ್ಮ ಪಕ್ಷವು ಮತ್ತೆ ಸರ್ಕಾರಕ್ಕೆ ಮರಳಬಹುದು ಎಂದು ಅವರು ಹೇಳಿದರು.
ಬೆನ್-ಗ್ವೀರ್ ಅವರ ಪಕ್ಷವು ಸರ್ಕಾರದಿಂದ ಹೊರ ನಡೆದಿರುವುದರ ಪರಿಣಾಮದಿಂದ 120 ಸದಸ್ಯರ ಸಂಸತ್ತಿನಲ್ಲಿ ನೆತನ್ಯಾಹು ಅವರ ಮೈತ್ರಿಕೂಟವು 62 ಸದಸ್ಯರ ಅಲ್ಪ ಬಹುಮತದ ಅಂಚಿಗೆ ಬಂದಿದೆ. ಇನ್ನು ಬಲಪಂಥೀಯ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಏನಾದರೂ ರಾಜೀನಾಮೆ ನೀಡಿದರೆ ನೆತನ್ಯಾಹು ತಮ್ಮ ಬಹುಮತ ಕಳೆದುಕೊಳ್ಳಲಿದ್ದು, ದೇಶದಲ್ಲಿ ಹೊಸದಾಗಿ ಚುನಾವಣೆ ನಡೆಯಬೇಕಾಗುತ್ತದೆ.
ಏತನ್ಮಧ್ಯೆ, ಹಮಾಸ್ ಭಾನುವಾರ ಬಿಡುಗಡೆ ಮಾಡಲು ಯೋಜಿಸಿರುವ ಮೂವರು ಒತ್ತೆಯಾಳುಗಳನ್ನು ಹೆಸರುಗಳನ್ನು ಬಹಿರಂಗಪಡಿಸಿದೆ. ಒಪ್ಪಂದಕ್ಕೆ ಅನುಗುಣವಾಗಿ ಹೆಸರುಗಳನ್ನು ಹಸ್ತಾಂತರಿಸುವವರೆಗೂ ಗಾಜಾದಲ್ಲಿ ಹೋರಾಟವನ್ನು ಮುಂದುವರೆಸುವುದಾಗಿ ಇಸ್ರೇಲ್ ಈ ಹಿಂದೆ ಹೇಳಿತ್ತು.
ಹಮಾಸ್ನ ಸಶಸ್ತ್ರ ವಿಭಾಗವು ಸಾಮಾಜಿಕ ಮಾಧ್ಯಮದಲ್ಲಿ ಹೆಸರುಗಳನ್ನು ಪ್ರಕಟಿಸಿದ ನಂತರ ಇಸ್ರೇಲ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ಟೋಬರ್ 7, 2023ರಂದು ಪ್ರಾರಂಭವಾದ ಯುದ್ಧವು ಗಾಜಾದಲ್ಲಿ 46,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಹೋರಾಟದಲ್ಲಿ ನೂರಾರು ಇಸ್ರೇಲಿ ಸೈನಿಕರು ಸಹ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಇಸ್ರೇಲ್ - ಹಮಾಸ್ ಕದನ ವಿರಾಮ: 33 ಇಸ್ರೇಲಿ ಒತ್ತೆಯಾಳು, 1,890 ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಸಿದ್ಧತೆ - GAZA CEASEFIRE DEAL