ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಲೆಜೆಂಡರಿ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ನಿರ್ದೇಶನದಲ್ಲಿ 2009ರಲ್ಲಿ ಮೂಡಿಬಂದ 'ಮಗಧೀರ' ತೆಲುಗಿನ ಬ್ಲಾಕ್ಬಸ್ಟರ್ ಚಿತ್ರಗಳಲ್ಲೊಂದು. ರಾಮ್ ಚರಣ್ ಮತ್ತು ಕಾಜಲ್ ಅಗರ್ವಾಲ್ ನಟನೆಯ ಮಗಧೀರ, ಆ ಕಾಲದ ಅತಿ ಹೆಚ್ಚು ಗಳಿಕೆಯ ತೆಲುಗು ಚಲನಚಿತ್ರಗಳಲ್ಲಿ ಒಂದಾಗಿದೆ. ಆರ್ಆರ್ಆರ್ ಮೂಲಕ ವಿಶ್ವವಿಖ್ಯಾತರಾಗಿರುವ ಎಸ್.ಎಸ್ ರಾಜಮೌಳಿ ಮತ್ತು ರಾಮ್ ಚರಣ್ ಕಾಂಬಿನೇಶನ್ನ 2009ರ ಸಿನಿಮಾ ಮರು ಬಿಡುಗಡೆಗೆ ಸಜ್ಜಾಗಿದೆ. ಈ ಬಗ್ಗೆ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮಾರ್ಚ್ 27, ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಅವರ ಹುಟ್ಟುಹಬ್ಬ. ಆರ್ಆರ್ಅರ್ ಬಳಿಕ ನಟನ ಜನಪ್ರಿಯತೆ ಮತ್ತು ಅಭಿಮಾನಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದ್ದು, ಈ ಬಾರಿ ಅವರ ಹುಟ್ಟುಹಬ್ಬ ಹಿಂದಿನದಕ್ಕಿಂತ ಹೆಚ್ಚು ವಿಶೇಷವಾಗಿರಲಿದೆ ಎಂದು ನಂಬಲಾಗಿದೆ. ಜನ್ಮದಿನದ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 26ರಂದು ಮಗಧೀರ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಆಗಲಿದೆ. ಈ ವಿಶೇಷ ಪ್ರದರ್ಶನ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿರುವ ಅವರ ಅಭಿಮಾನಿಗಳನ್ನು ಸಂತೋಷಪಡಿಸುವ ಗುರಿ ಹೊಂದಿದೆ.
ಯಶಸ್ವಿ ಚಿತ್ರದ ಮರುಬಿಡುಗಡೆ ಚಿತ್ರಮಂದಿರಗಳಿಗೆ ಅಪಾರ ಸಂಖ್ಯೆಯ ಸಿನಿಪ್ರಿಯರನ್ನು ಸೆಳೆಯೋ ಸಾಧ್ಯತೆ ಇದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್, ಕಾಜಲ್ ಅಗರ್ವಾಲ್, ಶ್ರೀಹರಿ, ದೇವ್ ಗಿಲ್, ಸುನೀಲ್ ಸೇರಿದಂತೆ ಹಲವರು ನಟಿಸಿದ್ದಾರೆ. ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಅವರ ಅದ್ಭುತ ಸಂಗೀತವನ್ನು ಹೊಂದಿದೆ.