ಕರ್ನಾಟಕ

karnataka

ETV Bharat / entertainment

ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಸಬಾರದೇ?: ರಕ್ಷಿತ್ ಶೆಟ್ಟಿ - Rakshit Shetty

ರಕ್ಷಿತ್ ಶೆಟ್ಟಿ ನಿರ್ಮಿಸಿದ್ದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಒಟಿಟಿಯಲ್ಲಿ ಲಭ್ಯವಿದ್ದು, ಚಿತ್ರತಂಡ ಕಾನೂನು ಅಡೆತಡೆ ಎದುರಿಸುತ್ತಿದೆ.

Rakshit Shetty
ರಕ್ಷಿತ್ ಶೆಟ್ಟಿ (ETV Bharat)

By ETV Bharat Karnataka Team

Published : Aug 2, 2024, 3:26 PM IST

ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ (ETV Bharat)

ಬೆಂಗಳೂರು: ಜನವರಿ 26ರಂದು ರಕ್ಷಿತ್ ಶೆಟ್ಟಿ ನಿರ್ಮಿಸಿರುವ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆಯಾಗಿ, ಸದ್ಯ ಒಟಿಟಿಯಲ್ಲಿ ಲಭ್ಯವಿದೆ. ಚಿತ್ರದಲ್ಲಿ 'ನ್ಯಾಯ ಎಲ್ಲಿದೆ' ಹಾಗೂ 'ಗಾಳಿಮಾತು' ಚಿತ್ರಗಳ 2 ಹಾಡುಗಳನ್ನು ಬಳಸಿರುವ ಹಿನ್ನೆಲೆಯಲ್ಲಿ ಕೃತಿಚೌರ್ಯ ಆರೋಪ ಪ್ರಕರಣ ದಾಖಲಾಗಿತ್ತು. ಈ ಕುರಿತು ರಕ್ಷಿತ್ ಶೆಟ್ಟಿ ಇಂದು ಯಶವಂತಪುರ ಪೊಲೀಸರೆದುರು ಹಾಜರಾಗಿ ಎರಡು ಗಂಟೆ ವಿಚಾರಣೆ ಎದುರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ''ಕಾಪಿರೈಟ್ ಬಗ್ಗೆ ಸಿನಿಮಾ ಇಂಡಸ್ಟ್ರಿಯಲ್ಲೇ ನಾಲೆಡ್ಜ್​​​​ ಇಲ್ಲ. ನನ್ನ ಪ್ರಕಾರ, ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಸಂದರ್ಭಕ್ಕೆ ಬೇಕಾದಂತಹ ಹಿನ್ನೆಲೆ ಗೀತೆಯಾಗಿ ಆ ಹಾಡನ್ನು 6 ಸೆಕೆಂಡ್ ಅಷ್ಟೇ ಬಳಸಲಾಗಿದೆ. ಅಷ್ಟಕ್ಕೆ ಕಾಪಿರೈಟ್ಸ್ ಅಡಿ ದೂರು ದಾಖಲಿಸಿದ್ದಾರೆ. ಹಾಗಾದ್ರೆ, ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ" ಎಂದು ಪ್ರಶ್ನಿಸಿದರು.

"ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ಕಾಪಿರೈಟ್ ಅಂದರೆ ಏನು ಎಂಬುದನ್ನು ನ್ಯಾಯಾಲಯದಲ್ಲಿ ನಾನು ತಿಳಿದುಕೊಳ್ಳಬೇಕು. ಈ ಹಿಂದೆಯೂ ಕೂಡಾ ಕಾಪಿರೈಟ್ ಪ್ರಕರಣದಡಿ ಹೋರಾಟ ಮಾಡಿದ್ದೆ" ಎಂದು ತಿಳಿಸಿದರು.

"ಜನವರಿಯಲ್ಲಿ ತೆರೆಕಂಡ ಬ್ಯಾಚುಲರ್ಸ್‌ ಚಿತ್ರದಲ್ಲಿ ಮೂರ್ನಾಲ್ಕು ಹಳೇ ಹಾಡುಗಳನ್ನು ಬ್ಯಾಕ್ ಗ್ರೌಂಡ್‌ನಲ್ಲಿ ಬಳಸುವ ಸನ್ನಿವೇಶವಿತ್ತು. ಈ ಹಾಡುಗಳ ಬಳಕೆಗೆ ಅನುಮತಿ ತೆಗೆದುಕೊಳ್ಳಲು ಮುಂದಾಗಿದ್ದೆ. ದೂರುದಾರರಿಂದ ದೊಡ್ಡ ಮೊತ್ತದ ಬೇಡಿಕೆ ಬಂತು. 3-4 ಬಾರಿ ಮಾತುಕತೆಯೂ ಆಗಿತ್ತು. ಆದ್ರೆ ಅಲ್ಲಿ ಸರಿಯಾದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಸಾಂದರ್ಭಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೇ" ಎಂದು ತಿಳಿಸಿದರು.

''ಮೂರ್ನಾಲ್ಕು ಹಳೇ ಕನ್ನಡ ಹಾಡುಗಳನ್ನು ಬ್ಯಾಕ್​ಗ್ರೌಂಡ್​ನಲ್ಲಿ ಬಳಸಿದ್ದೆವು. ಎರಡು ಹಾಡುಗಳಿಗೆ ಸರಿಗಮ ಸಂಸ್ಥೆಯ ಅನುಮತಿ ಪಡೆದೆವು. ಅವರು ಹೇಳಿದ ಮೊತ್ತಕ್ಕೆ ಹಾಡುಗಳನ್ನು ತೆಗೆದುಕೊಂಡ್ವಿ. ಇನ್ನೆರಡು ಹಾಡುಗಳ ಬಗ್ಗೆ ಹೇಳಬೇಕಂದ್ರೆ, ಅದು ಕಾಪಿರೈಟ್​​ ವಯಲೇಶನ್​​ ಅಲ್ಲ. ಆದ್ರೂ ಅನುಮತಿ ಪಡೆಯಿರಿ ಎಂದು ನನ್ನ ಪ್ರೊಡಕ್ಷನ್​ ಮ್ಯಾನೇಜರ್​​ ಬಳಿ ಹೇಳಿದ್ದೆ. ಪ್ರೊಡಕ್ಷನ್​ ಮ್ಯಾನೇಜರ್ ಆ ಹಾಡುಗಳ ಹಕ್ಕುಸ್ವಾಮ್ಯ ಹೊಂದಿರುವ ಸಂಸ್ಥೆಗೆ ಕರೆ ಮಾಡಿದ್ದು, ಅವರು ದೊಡ್ಡ ಮಟ್ಟದ ಮೊತ್ತಕ್ಕೆ ಬೇಡಿಕೆ ಇಟ್ಟರು. ಏಕೆ ಇಷ್ಟು ದೊಡ್ಡ ಮೊತ್ತ ಪಾವತಿಸಬೇಕೆಂದು ನಮಗನಿಸಿತು. ಈ ಬಗ್ಗೆ ಎರಡ್ಮೂರು ಬಾರಿ ಮಾತುಕತೆ ಆಗಿದೆ. ಅವರು ಹೇಳ್ತೀವಿ ಅಂತಾ ತಿಳಿಸಿದ್ದರು. ಆದ್ರೆ ಪ್ರತಿಕ್ರಿಯೆ ಬರಲಿಲ್ಲ''.

ಇದನ್ನೂ ಓದಿ:ಮಾಲೀಕರ ಅನುಮತಿಯಿಲ್ಲದೇ ಹಾಡುಗಳ ಬಳಕೆ ಆರೋಪ: ವಿಚಾರಣೆಗೆ ಹಾಜರಾದ ರಕ್ಷಿತ್ ಶೆಟ್ಟಿ - Rakshit Shetty Case

''ಸಿನಿಮಾ ರಿಲೀಸ್​​ ಡೇಟ್​​ ಸಮೀಪಿಸಿದ ಹಿನ್ನೆಲೆಯಲ್ಲಿ ಕೆಲಸ ಮುಗಿಸಿ ಸಿನಿಮಾ ಬಿಡುಗಡೆಗೊಳಿಸಿದೆವು. 3-4 ತಿಂಗಳ ನಂತರ ಕೇಸ್​​​ ಹಾಕಿದ್ದಾರೆ. ಒಂದು ಹಾಡು 6 ಸೆಕೆಂಡ್​ ಟಿವಿಯಲ್ಲಿ ಬರುತ್ತದಷ್ಟೇ. ಮತ್ತೊಂದು ಶಾಲೆಯಲ್ಲಿ ವಿದ್ಯಾರ್ಥಿನಿ ಕ್ಲಾಸ್​ ರೂಮ್​ ಮುಂದೆ ಹಾಡುವಂತಹ ಸಂದರ್ಭ. ಇವರಡೂ ಕೂಡಾ ಕಾಪಿರೈಟ್​​ ವಯಲೇಶನ್​​ ಅಲ್ಲ ಅನ್ನೋದು ನನ್ನ ವಾದ. ಕಾಪಿರೈಟ್​​ ಬಗ್ಗೆ ಚಿತ್ರರಂಗದೊಳಗೇನೆ ಗೊಂದಲಗಳಿವೆ. ಹಾಗಾಗಿ ಕಾನೂನು ಹೋರಾಟದ ಮೂಲಕ ತಿಳಿದುಕೊಳ್ಳಲು ಬಯಸಿದ್ದೇವೆ. ಕನ್ನಡ ಸಿನಿಮಾಗಳಲ್ಲಿ ಕನ್ನಡ ಹಾಡುಗಳನ್ನು ತೋರಿಸುವಂತೆಯೇ ಇಲ್ಲವೇ?. ಅದನ್ನು ರೀಮೇಕ್​ ಮಾಡಿಯೋ, ಯೂಟ್ಯೂಬ್​ನಲ್ಲಿ ಬಿಟ್ಟು ಲಾಭ ಪಡೆಯುತ್ತಿಲ್ಲ. ಹಾಗಾಗಿ ಸರಿಯಾದ ರೂಲ್ಸ್​​ ಗೊತ್ತಾಗಬೇಕು. ಕಾಪಿರೈಟ್​ ಬಗ್ಗೆ ತಿಳಿಯಬೇಕು. ಕಾನೂನು ಮೂಲಕ ತಿಳಿದುಕೊಳ್ಳಲಿದ್ದೇವೆ'' ಎಂದು ತಿಳಿಸಿದರು.

ಇದನ್ನೂ ಓದಿ:'ಕಂಟೆಂಟ್ ಸಿನಿಮಾಗಳಿಂದ ಯಾರಿಗೂ ನಷ್ಟವಾಗಲ್ಲ': 'ಕಪಟಿ' ನಿರ್ಮಾಪಕ ದಯಾಳ್ ಪದ್ಮನಾಭನ್ - Kapati

ABOUT THE AUTHOR

...view details