ಜಾಮ್‌ನಗರ: ಗುಜರಾತ್‌ನ ಜಾಮ್‌ನಗರದ ನ್ಯಾಯಾಲಯ ಶನಿವಾರದಂದು ಖ್ಯಾತ ನಿರ್ದೇಶಕ ರಾಜ್ಕುಮಾರ್ ಸಂತೋಷಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಚೆಕ್ ರಿಟರ್ನ್ ಕೇಸ್ನಲ್ಲಿ ದೂರುದಾರರಿಗೆ 2 ಕೋಟಿ ರೂ. ನೀಡುವಂತೆ ಸೂಚಿಸಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಜೆ ಗಧ್ವಿ ಅವರು ಸಂತೋಷಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ, ದೂರುದಾರರಿಗೆ 2 ಕೋಟಿ ರೂ ನೀಡುವಂತೆ ಸೂಚಿಸಿ ಆದೇಶ ಹೊರಡಿಸಿದರು. ನಿರ್ದೇಶಕರು ದೂರುದಾರರಿಂದ ತೆಗೆದುಕೊಂಡಿದ್ದ ಮೊತ್ತಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿದೆ. ಜೊತೆಗೆ ಸಂತೋಷಿ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಈ ಆದೇಶಕ್ಕೆ 30 ದಿನಗಳ ಕಾಲ ತಡೆ ನೀಡಲು ಕೋರ್ಟ್ ಅವಕಾಶ ನೀಡಿದೆ.
ಏನಿದು ಪ್ರಕರಣ?ಕೈಗಾರಿಕೋದ್ಯಮಿ ಅಶೋಕ್ ಲಾಲ್ ಅವರ ದೂರಿನ ಪ್ರಕಾರ, ಸಂತೋಷಿ ಅವರಿಗೆ ಸಿನಿಮಾ ನಿರ್ಮಿಸಲು 1 ಕೋಟಿ ರೂಪಾಯಿ ಸಾಲ ನೀಡಿದ್ದರು. ಬಳಿಕ ನಿರ್ದೇಶಕರು, ಅಶೋಕ್ ಲಾಲ್ ಅವರಿಗೆ ತಲಾ 10 ಲಕ್ಷ ರೂಪಾಯಿಯ 10 ಚೆಕ್‌ಗಳನ್ನು ನೀಡಿದ್ದರು. ಆದ್ರೆ ಬ್ಯಾಂಕ್ ಖಾತೆಯಲ್ಲಿ ಹಣದ ಕೊರತೆಯಿಂದಾಗಿ 10 ಚೆಕ್‌ಗಳು ಹಿಂತಿರುಗಿದವು. ಈ ಹಿನ್ನೆಲೆ ಅಶೋಕ್ ಲಾಲ್, ಸಂತೋಷಿ ಅವರಿಗೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಲೀಗಲ್ ನೋಟಿಸ್ ಕಳುಹಿಸಿದ್ದರು. ಸಂತೋಷಿ ಪಡೆದ ಹಣವನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆ ಲಾಲ್ ಅವರು 2017ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
''ನಂತರ, ಆರೋಪಿ ತಮ್ಮ ವಿರುದ್ಧದ ಮೊಕದ್ದಮೆಯನ್ನು ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸಲು ಅರ್ಜಿ ಸಲ್ಲಿಸಿದ್ದರು. ಇದನ್ನು ದೂರುದಾರರು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಸಂತೋಷಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಜಾಮ್‌ನಗರದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಸೆಷನ್ಸ್ ನ್ಯಾಯಾಲಯವು ಸೂಚಿಸಿತು'' ಎಂದು ದೂರುದಾರ ಲಾಲ್ ಅವರ ವಕೀಲ ಪಿಯೂಷ್ ಭೋಜಾನಿ ತಿಳಿಸಿದ್ದಾರೆ.