ಬೆಂಗಳೂರು: ಬೆಂಗಳೂರು ವಕೀಲರ ಸಂಘದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸಹಮತ ವ್ಯಕ್ತಪಡಿಸಿರುವ ಹೈಕೋರ್ಟ್, ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಾತ್ರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿ, ಅರ್ಜಿಗಳನ್ನು ವಜಾಗೊಳಿಸಿ ಗುರುವಾರ ಆದೇಶಿಸಿದೆ.
ವಕೀಲರ ಸಂಘದಲ್ಲಿ ತಮಗೆ ಶೇ.33ರಷ್ಟು ಮೀಸಲಾತಿ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಮಹಿಳಾ ಸದಸ್ಯರು ಮತ್ತು ಮಹಿಳಾ ವಕೀಲರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ, ಈ ಕುರಿತು ಸುಪ್ರೀಂ ಕೋರ್ಟ್ ಮಾತ್ರ ನಿರ್ಧಾರ ಮಾಡಬೇಕು ಎಂದು ತಿಳಿಸಿತು. ಹಾಗೂ ಯಾವುದೇ ಆದೇಶ ನೀಡಲು ನಿರಾಕರಿಸಿತು.
ಅಲ್ಲದೆ, ಮಹಿಳಾ ಮೀಸಲಾತಿ ಕುರಿತಂತೆ ನಾವು ನಿಮ್ಮ (ಮಹಿಳೆಯರ) ಪರವಾಗಿಯೇ ಇದ್ದೇವೆ. ಆದರೆ, ಮೀಸಲಾತಿ ನೀಡಬೇಕಾದಲ್ಲಿ ಕಾನೂನುಬದ್ಧವಾಗಿರಬೇಕು. ಮೀಸಲಾತಿ ಸಂಬಂಧ ಆದೇಶ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ಗೆ ಹೆಚ್ಚಿನ ಅಧಿಕಾರವಿದ್ದು, ಅಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪೀಠ ಮೌಖಿಕವಾಗಿ ಹೇಳಿದೆ.
"ಸುಪ್ರೀಂ ಕೋರ್ಟ್ ಮಾತ್ರ ಆದೇಶ ನೀಡಬಹುದು": ಸಂಘದ ಆಡಳಿತ ಮಂಡಳಿಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಸಂಬಂಧ ಯಾವುದೇ ಕಾನೂನು ಇಲ್ಲ. ಜೊತೆಗೆ, ಸಂಘದ ಬೈಲಾದಲ್ಲಿ ಈ ರೀತಿಯ ಮೀಸಲಾತಿ ನೀಡುವುದಕ್ಕೆ ಅವಕಾಶ ಕಲ್ಪಿಸಿರಬೇಕು. ಅಂತಹ ಸಂದರ್ಭದಲ್ಲಿ ಬೈಲಾ ನಿಯಮಗಳು ಉಲ್ಲಂಘನೆಯಾದಲ್ಲಿ ಹೈಕೋರ್ಟ್ ಆದೇಶ ನೀಡಬಹುದಾಗಿದೆ. ಆದರೆ, ಬೈಲಾದಲ್ಲಿ ಮೀಸಲಾತಿ ಕುರಿತು ಪ್ರಸ್ತಾಪ ಇಲ್ಲದಿದ್ದ ಸಂದರ್ಭದಲ್ಲಿ ಅದಕ್ಕೆ ತಿದ್ದುಪಡಿ ತರಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಮಾತ್ರ ಆದೇಶ ನೀಡಬಹುದಾಗಿದೆ. ಆದ್ದರಿಂದ ಹೈಕೋರ್ಟ್ ಯಾವುದೇ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಈ ವೇಳೆ ಅರ್ಜಿದಾರರ ಪರ ವಕೀಲರು ಮಧ್ಯಪ್ರವೇಶಿಸಿ, ''ವಕೀಲರ ಸಂಘದಲ್ಲಿ 2024ರ ಚುನಾವಣೆಗೆ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದೇ ರೀತಿಯ ಆದೇಶ ನೀಡಬೇಕು'' ಎಂದು ಕೋರಿದರು.
ಇದಕ್ಕೆ ಪೀಠ, ''ಸುಪ್ರಿಂ ಕೋರ್ಟ್ ಸಂವಿಧಾನದ ಪರಿಚ್ಛೇದ 142ರ ಅಡಿಯಲ್ಲಿ ವಕೀಲರ ಸಂಘಕ್ಕೆ ಶೇ.33ರಷ್ಟು ಮೀಸಲಾತಿ ನೀಡಲು ಆದೇಶಿಸಿದೆ. ಆದರೆ, ಹೈಕೋರ್ಟ್ಗೆ ಈ ಅಧಿಕಾರವಿಲ್ಲ'' ಎಂದು ತಿಳಿಸಿತು.
''ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜನವರಿ 2ರಂದು ಅಂತಿಮ ಮತದಾರರ ಪಟ್ಟಿ ಘೋಷಿಸಲಾಗಿದೆ. ಇದರಿಂದ ಚುನಾವಣಾ ನೀತಿ ಸಂಹಿತೆ ಚಾಲ್ತಿಗೆ ಬಂದಿದೆ. ಫೆಬ್ರವರಿ 2ಕ್ಕೆ ಎಎಬಿಗೆ ಚುನಾವಣೆ ನಿಗದಿಯಾಗಿರುವುದರಿಂದ ಅರ್ಜಿದಾರರ ಕೋರಿಕೆಯನ್ನು ಮನ್ನಿಸಲಾಗದು. ಆದ್ದರಿಂದ, ಅರ್ಜಿ ವಜಾಗೊಳಿಸುತ್ತಿರುವುದಾಗಿ'' ಪೀಠ ತಿಳಿಸಿದೆ.
ಮತ್ತೊಬ್ಬ ಅರ್ಜಿದಾರರ ಪರ ವಕೀಲರು, ''ಕಳೆದ 6 ತಿಂಗಳ ಹಿಂದೆಯೇ ಮಹಿಳಾ ವಕೀಲರಿಗೆ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವಂತೆ ಎಎಬಿಗೆ ಮನವಿ ಸಲ್ಲಿಸಲಾಗಿತ್ತು. ಅದನ್ನು ಅವರು ಪರಿಗಣಿಸಿಲ್ಲ. ಆದ್ದರಿಂದ, ದೆಹಲಿ ವಕೀಲರ ಸಂಘದ ಚುನಾವಣೆಯನ್ನು ಮುಂದೂಡುವ ಮೂಲಕ ದೆಹಲಿ ಹೈಕೋರ್ಟ್ ದಿಟ್ಟ ಕ್ರಮ ಕೈಗೊಂಡಿತ್ತು. ಈ ನ್ಯಾಯಾಲಯವೂ ಅದೇ ನಿಲುವು ಕೈಗೊಳ್ಳಬೇಕು. ಬೈಲಾದಲ್ಲಿ ಅವಕಾಶವಿಲ್ಲದಿದ್ದರೂ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳಾ ಮೀಸಲಾತಿಯು ಸುಧಾರಣಾ ಕ್ರಮವಾಗಿದ್ದು, ಅದನ್ನು ಜಾರಿಗೊಳಿಸುವ ಮೇಲ್ಪಂಕ್ತಿ ಹಾಕಬೇಕು. ಈಗಿನ ಅವಕಾಶ ತಪ್ಪಿದರೆ ಇನ್ನೂ ಮೂರು ವರ್ಷ ಕಾಯಬೇಕಾಗುತ್ತದೆ'' ಎಂದು ಪೀಠಕ್ಕೆ ವಿವರಿಸಿದರು.
ಬೆಂಗಳೂರು ವಕೀಲರ ಸಂಘದ ಪರ ಹಾಜರಿದ್ದ ಸಂಘದ ನಿಕಟಪೂರ್ವ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ''ಬೈಲಾಗೆ ತಿದ್ದುಪಡಿಯಾಗದೇ ಮಹಿಳಾ ಮೀಸಲಾತಿ ಕಲ್ಪಿಸಲಾಗದು. ಅದಾಗ್ಯೂ, ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ನಾವು ಬದ್ಧವಾಗಿದ್ದೇವೆ. ಆಡಳಿತ ಮಂಡಳಿಯ ಅವಧಿಯು ಕಳೆದ ವರ್ಷದ ಡಿಸೆಂಬರ್ 19ಕ್ಕೆ ಕೊನೆಗೊಡಿರುವುದರಿಂದ ಈ ಹಂತದಲ್ಲಿ ಎಎಬಿ ಪರವಾಗಿ ಯಾವುದೇ ಹೇಳಿಕೆ ನೀಡಲಾಗದು'' ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ಪದವಿ ಪ್ರಮಾಣಪತ್ರವಿದ್ದರೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ಗೆ ಪಿಯುಸಿ ಪ್ರಮಾಣಪತ್ರ ಅಗತ್ಯವಿಲ್ಲ: ಹೈಕೋರ್ಟ್