ದಕ್ಷಿಣ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾದ ಕೀರ್ತಿ ಸುರೇಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ರಘು ತಾತಾ'. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಚಿತ್ರಗಳನ್ನು ಕೊಡುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಈ ಚಿತ್ರದ ಮೂಲಕ ಕೆಜಿಎಫ್, ಕಾಂತಾರದಂತಹ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಕಾಲಿವುಡ್ಗೆ ಕಾಲಿಟ್ಟಿದೆ. ಇಂದು ನಿರ್ಮಾಪಕರು ಟ್ರೇಲರ್ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಈವರೆಗೆ ಕೆಲ ಸಾಮಾಜಿಕ ಸಂದೇಶ ಅಥವಾ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇದು ಕೂಡ ಅಂಥದ್ದೇ ಒಂದು ಸಿನಿಮಾ. ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿರುವ 'ರಘು ತಾತಾ' ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಅದರ ಭಾಗವಾಗಿ ಇಂದು ಟ್ರೇಲರ್ ಬಿಡುಗಡೆ ಆಗಿದ್ದು, ಸುಮನ್ ಕುಮಾರ್ ನಿರ್ದೇಶನದ ಸಿನಿಮಾ ಸುತ್ತಲಿನ ಉತ್ಸಾಹ ದುಪ್ಪಟ್ಟಾಗಿದೆ.
ಎಂಟರ್ಟೈನಿಂಗ್ ಟ್ರೇಲರ್ ಹಂಚಿಕೊಂಡ ಹೊಂಬಾಳೆ ಫಿಲ್ಮ್ಸ್, "ಉತ್ಸಾಹ ಮತ್ತು ನಗುವನ್ನು ಹಿಡಿಯಿರಿ. ಹೊಸ ಟ್ವಿಸ್ಟ್‌ನೊಂದಿಗೆ ಮೋಜಿನಲ್ಲಿ ಮುಳುಗಿ. ನಿಮಗಾಗಿ ರಘು ತಾತಾ ಟ್ರೇಲರ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ" ಎಂದು ಬರೆದುಕೊಂಡಿದೆ. ಪ್ರತೀ ಫೇಮ್ನಲ್ಲೂ ಕೀರ್ತಿ ಸುರೇಶ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹಳ್ಳಿ ಹುಡುಗಿಯಾಗಿ ಮಿಂಚು ಹರಿಸಿದ್ದಾರೆ. ತಮ್ಮ ಸ್ಕ್ರೀನ್ ಪ್ರೆಸೆನ್ಸ್, ಒನ್ ಲೈನ್ ಡೈಲಾಗ್ಸ್ನಿಂದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ ಎಂಬುದು ಟ್ರೇಲರ್ನಲ್ಲಿ ಬಹುತೇಕ ಖಚಿತವಾಗಿದೆ. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ವೀಕ್ಷಿಸುವ ಕಾತರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿದ್ದಾರೆ.