ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜನಪ್ರಿಯತೆ ಗಡಿ ಮೀರುತ್ತಿದೆ. ಖ್ಯಾತ ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್'ನ ಪುಷ್ಪ ಪುಷ್ಪ ಹಾಡು ನಿನ್ನೆಯಷ್ಟೇ ಅನಾವರಣಗೊಂಡು ಸಖತ್ ಸದ್ದು ಮಾಡುತ್ತಿದೆ. ಬುಧವಾರ ಬಿಡುಗಡೆ ಆದ ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ 6 ಭಾಷೆಗಳಲ್ಲಿ 1 ಮಿಲಿಯನ್ಗೂ ಹೆಚ್ಚು ಲೈಕ್‌ಗಳನ್ನು ಸಂಪಾದಿಸಿದೆ. ತೆಲುಗು ಮತ್ತು ಹಿಂದಿ ಆವೃತ್ತಿಯ ಹಾಡು ಕೇವಲ 24 ಗಂಟೆಗಳಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಾಗಿ ಹೊರಹೊಮ್ಮಿವೆ.
ದೇಶ, ವಿದೇಶಗಳಲ್ಲಿ ದಾಖಲೆ: 2024ರ ಬಹುನಿರೀಕ್ಷಿತ ಚಿತ್ರದ ಹಿಂದಿರುವ ಮೈತ್ರಿ ಮೂವಿ ಮೇಕರ್ಸ್ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದೆ. "ಕಳೆದ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ತೆಲುಗು ಮತ್ತು ಹಿಂದಿ ಸಾಹಿತ್ಯವುಳ್ಳ ಪುಷ್ಪ ಪುಷ್ಪ ಸಾಂಗ್ಸ್ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಾಗಿವೆ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ ರಾಜ್ ಪಾತ್ರದ ನೋಟವಿದೆ. ಮತ್ತೊಂದು ಪೋಸ್ಟರ್ ಹಂಚಿಕೊಂಡು ಭಾರತದಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ವಿಡಿಯೋ ಸಾಂಗ್ ಎಂದು ಮಾಹಿತಿ ಕೊಟ್ಟಿದೆ.
15 ದೇಶಗಳಲ್ಲಿ ಟ್ರೆಂಡಿಂಗ್: ಚಿತ್ರನಿರ್ಮಾಪಕರು ಲೇಟೆಸ್ಟ್ ಆಗಿ ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಲೈಕ್ಸ್, ವೀವ್ಸ್ನ ಮಾಹಿತಿ ಹಂಚಿಕೊಳ್ಳಲಾಗಿದೆ. 6 ಭಾಷೆ ಸೇರಿ 24 ಗಂಟೆಯೊಳಗೆ ಹೆಚ್ಚು ವೀಕ್ಷಣೆಯಾದ ಭಾರತದ ಲಿರಿಕಲ್ ವಿಡಿಯೋ ಸಾಂಗ್ ಎಂದು ಶೀರ್ಷಿಕೆ ಕೊಡಲಾಗಿದೆ. ಉಳಿದಂತೆ, 40 ಮಿಲಿಯನ್ ಪ್ಲಸ್ ವೀವ್ಸ್, 1.27 ಮಿಲಿಯನ್ ಲೈಕ್ಸ್ ಪಡೆದಿದ್ದು, 15 ದೇಶಗಳಲ್ಲಿ ಟ್ರೆಂಡಿಂಗ್ನಲ್ಲಿದೆ. ಆಲ್ ಟೈಮ್ ರೆಕಾರ್ಡ್ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.