ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಪುಷ್ಪ 2: ದಿ ರೂಲ್ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಪುಷ್ಪಾ: ದಿ ರೈಸ್ನಲ್ಲಿ ಸಮಂತಾ ನಟನೆಯ ಹೂ ಅಂಟಾವ ಹಾಡು ಪಡ್ಡೆ ಹುಡುಗರನ್ನ ಹುಚ್ಚೆಬ್ಬಿಸಿತ್ತು. ಇದೀಗ ಪುಷ್ಪ 2 ಸಿನಿಮಾದಲ್ಲೂ ಇಂಥದ್ದೇ ಐಟಂ ಸಾಂಗ್ ಇರಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಯಾವ ನಟಿ ಈ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ವಿಶೇಷ ಹಾಡಿಗೆ ಹೆಜ್ಜೆ ಹಾಕುವ ನಟಿ ಹೆಸರು ಇನ್ನು ಅಂತಿಮಗೊಳಿಸಲಾಗಿಲ್ಲವಾದರೂ, ಅಭಿಮಾನಿಗಳಿಗೆ ರೋಮಾಂಚನಕಾರಿ ಸುದ್ದಿಯೊಂದು ಇದೆ.
ಸಿನಿ ಮೂಲಗಳ ಪ್ರಕಾರ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರು ಹಾಡಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್ ನಟಿಯರಾದ ಜಾನ್ವಿ ಕಪೂರ್ ಮತ್ತು ತೃಪ್ತಿ ದಿಮ್ರಿ ಅವರ ಹೆಸರುಗಳು ಕೇಳಿ ಬರುತ್ತಿದೆ. ಆದರೆ, ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿಲ್ಲ. ರಶ್ಮಿಕಾ ಮತ್ತು ಈ ಇಬ್ಬರು ನಟಿಯರಲ್ಲಿ ಒಬ್ಬರ ನಡುವಿನ ಸಂಭಾವ್ಯ ಕಾಂಬಿನೇಷನ್ ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸಿದೆ. ಜಾಹ್ನವಿ ಕಪೂರ್ ಈಗಾಗಲೇ ರೂಹಿ ಚಿತ್ರದ ಜನಪ್ರಿಯ ಹಾಡಾದ ನಾಡಿಯೋನ್ ಪಾರ್ ನಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಮತ್ತೊಂದೆಡೆ, ತೃಪ್ತಿ ದಿಮ್ರಿ, ಇನ್ನೂ ಇಂತಹ ನೃತ್ಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲವಾದರೂ, ಪುಷ್ಪಾ 2: ದಿ ರೂಲ್ ನಲ್ಲಿ ಸೊಂಟ ಬಳುಕಿಸುವ ಮೂಲಕ ತನ್ನ ಪ್ರೊಫೈಲ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.
ಪುಷ್ಪಾ ಮತ್ತು ಐಪಿಎಸ್ ಭನ್ವರ್ ಸಿಂಗ್ ಶೇಖಾವತ್ ನಡುವಿನ ಫೈಟ್ ಮೊದಲ ಚಿತ್ರ ಎಲ್ಲಿಗೆ ನಿಂತಿತೊ ಅಲ್ಲಿಂದ ಮುಂದಿನ ಭಾಗವು ಆರಂಭವಾಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಜಗದೀಶ್ ಪ್ರತಾಪ್ ಮತ್ತು ಇನ್ನೂ ಅನೇಕ ತಾರಾ ಬಳಗವನ್ನು ಸಿನಿಮಾ ಒಳಗೊಂಡಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಿಸಿರುವ ಪುಷ್ಪ 2: ದಿ ರೂಲ್ ಆಗಸ್ಟ್ 15 ರಂದು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕುತೂಹಲಕಾರಿ ಕಥಾಹಂದರ, ಪ್ರತಿಭಾವಂತ ತಾರಾ ಬಳಗ ಮತ್ತು ಬಹು ನಿರೀಕ್ಷಿತ ಡ್ಯಾನ್ಸ್ಗಳೊಂದಿಗೆ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಬರೆಯುವ ನಿರೀಕ್ಷೆ ಹೊಂದಿದೆ.
ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿಯ 'ವಿಶ್ವಂಭರ'ದಲ್ಲಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ - Ashika Ranganath In Vishwambhara