2024 ಪೂರ್ಣಗೊಳ್ಳಲು ಇನ್ನೇನು ಮೂರು ದಿನಗಳಷ್ಟೇ ಬಾಕಿ. ಸಂಪೂರ್ಣ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಹೃದಯ ವಿದ್ರಾವಕ ಘಟನೆಗಳೂ ಜರುಗಿವೆ. ಕೆಲ ದಿಗ್ಗಜರಿಗೆ ನಾವು ವಿದಾಯ ಹೇಳಿದ್ದು, ಅವರು ಬಿಟ್ಟುಹೋಗಿರುವ ಪರಂಪರೆಯನ್ನು ಸ್ಮರಿಸುವ ಕ್ಷಣ ಇದಾಗಿದೆ. ಪೌರಾಣಿಕ ಸಂಗೀತಗಾರರು ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕರಿಂದ ಹಿಡಿದು ಪ್ರೀತಿಯ ನಟ ನಟಿಯರು ಮತ್ತು ಕೈಗಾರಿಕೋದ್ಯಮಿಗಳವರೆಗೆ, ಅವರ ಕೊಡುಗೆಗಳು ಮರೆಯಲಾಗದ ಛಾಪು ಮೂಡಿಸಿವೆ. ಈ ವರ್ಷ ನಾವು ಕಳೆದುಕೊಂಡ ಗಮನಾರ್ಹ ಭಾರತೀಯ ಗಣ್ಯರ ನೆನಪು ಇಲ್ಲಿದೆ.
ಶೋಭಿತಾ ಶಿವಣ್ಣ (ಡಿಸೆಂಬರ್ 1, ಆತ್ಮಹತ್ಯೆ): ಕನ್ನಡದ 'ಬ್ರಹ್ಮಗಂಟು' ಸೀರಿಯಲ್ ಖ್ಯಾತಿಯ ಕಿರುತೆರೆ ನಟಿ ಶೋಭಿತಾ ಶಿವಣ್ಣ ತಮ್ಮ 30ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದರು. ಹೈದರಾಬಾದ್‌ನ ಕೊಂಡಾಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾದರು. ಹಾಸನ ಜಿಲ್ಲೆಯ ಸಕಲೇಶಪುರ ಮೂಲದವರಾದ ಇವರು ನಿನ್ನಿಂದಲೇ ಧಾರಾವಾಹಿ ಮತ್ತು 'ಜಾಕ್‌ಪಾಟ್', 'ಎರಡೊಂದ್ಲ ಮೂರು', 'ವಂದನಾ', 'ಅಟೆಂಪ್ಟ್ ಟು ಮರ್ಡರ್' ಸೇರಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಸುಹಾನಿ ಭಟ್ನಾಗರ್ (ಫೆಬ್ರವರಿ 16, ಡರ್ಮಟೊಮಿಯೊಸಿಟಿಸ್): ಅಮೀರ್ ಖಾನ್ ನಟನೆಯ ದಂಗಲ್ ಚಿತ್ರದಲ್ಲಿ ಬಬಿತಾ ಫೋಗಟ್ (ಬಾಲ್ಯ) ಆಗಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಸುಹಾನಿ ಭಟ್ನಾಗರ್ ತಮ್ಮ 19ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದರು. ಅಪರೂಪದ ಕಾಯಿಲೆ ಡರ್ಮಟೊಮಿಯೊಸಿಟಿಸ್‌ಗೆ ಬಲಿಯಾದರು. ಈ ಅಕಾಲಿಕ ಮರಣವು ಅವರ ಭರವಸೆಯ ವೃತ್ತಿಜೀವನವನ್ನು ಮೊಟಕುಗೊಳಿಸಿದ್ದಲ್ಲದೇ, ಅಭಿಮಾನಿಗಳಿಗೆ ಆಘಾತ ನೀಡಿತ್ತು.
ಎಂ.ಟಿ ವಾಸುದೇವನ್ ನಾಯರ್ (ಡಿಸೆಂಬರ್ 25, ಹಾರ್ಟ್ ಫೈಲ್ಯೂರ್): ಹೆಸರಾಂತ ಮಲಯಾಳಂ ಲೇಖಕ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ.ವಾಸುದೇವನ್ ನಾಯರ್ ಅವರು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಾಹಿತ್ಯದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಇವರು ಮರಣಕ್ಕೂ 10 ದಿನಗಳ ಹಿಂದೆ ಅಸ್ವಸ್ಥರಾಗಿದ್ದರು. ಉಸಿರಾಟದ ತೊಂದರೆ ಹಿನ್ನೆಲೆ ಕೋಝಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರಿಗೆ ಹೃದಯಾಘಾತವಾಯಿತು. ಅವರ ನಿಧನದಿಂದ ಭಾರತೀಯ ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ.
ಶ್ಯಾಮ್ ಬೆನಗಲ್ (ಡಿಸೆಂಬರ್ 23, ಕಿಡ್ನಿ ಸಮಸ್ಯೆ): ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು. ಅಂಕುರ್, ನಿಶಾಂತ್ ಮತ್ತು ಮಂಥನ್‌ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಿಗೆ ಹೆಸರುವಾಸಿಯಾದ ಬೆನಗಲ್ ಭಾರತೀಯ ಚಿತ್ರರಂಗದಲ್ಲಿ ಕಥೆ ರವಾನಿಸುವ ಶೈಲಿಯನ್ನು ಮರು ವ್ಯಾಖ್ಯಾನಿಸಿದ್ದಾರೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ 90ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಮೀನಾ ಗಣೇಶ್ (ಡಿಸೆಂಬರ್ 19, ಸೆರೆಬ್ರಲ್ ಸ್ಟ್ರೋಕ್): ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಸೆರೆಬ್ರಲ್ ಸ್ಟ್ರೋಕ್‌ನಿಂದಾಗಿ ನಿಧನರಾದರು. ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿನ ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಅವರು ಐದು ದಿನಗಳ ಚಿಕಿತ್ಸೆ ನಂತರ ಫಲಕಾರೀಯಾಗದೇ ಕೊನೆಯುಸಿರೆಳೆದರು. ಮಲಯಾಳಂ ಸಿನಿಮಾ ಮತ್ತು ರಂಗಭೂಮಿಗೆ ನೀಡಿದ ಕೊಡುಗೆಗಳಿಂದಾಗಿ ಮೀನಾ ಗಣೇಶ್ ಬಹುತೇಕರ ಮನೆಮಾತಾಗಿದ್ದಾರೆ.
ಜಾಕಿರ್ ಹುಸೇನ್ (ಡಿಸೆಂಬರ್ 15, ಇಡಿಯೋಪ್ಯಾಥಿಕ್ ಪಲ್ಮೋನರಿ ಫೈಬ್ರೋಸಿಸ್): ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ತಮ್ಮ 73ನೇ ವಯಸ್ಸಿನಲ್ಲಿ ನಿಧನರಾದರು. ಈ ಸಾವು ಭಾರತೀಯ ಶಾಸ್ತ್ರೀಯ ಸಂಗೀತ ಜಗತ್ತನ್ನೇ ಶೋಕದಲ್ಲಿ ಮುಳುಗಿಸಿತ್ತು. ಹುಸೇನ್ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಪ್ರಾಮುಖ್ಯತೆಗೆ ತಂದ ಕೀರ್ತಿ ಹೊಂದಿದ್ದಾರೆ. ಹಲವು ಗ್ರ್ಯಾಮಿ ಪ್ರಶಸ್ತಿಗಳು ಸೇರಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದರು. ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಾದ ಇಡಿಯೋಪ್ಯಾಥಿಕ್ ಪಲ್ಮೋನರಿ ಫೈಬ್ರೋಸಿಸ್‌ನಿಂದ ಅವರ ಮರಣ ಸಂಭವಿಸಿತು.
ಶಾರ್ದಾ ಸಿನ್ಹಾ (ನವೆಂಬರ್ 5, ಬ್ಲಡ್ ಪಾಯ್ಸನಿಂಗ್): ಬಿಹಾರದ ಜನಪ್ರಿಯ ಗಾಯಕಿ ಶಾರ್ದಾ ಸಿನ್ಹಾ ಅವರು ಬ್ಲಡ್ ಪಾಯ್ಸನಿಂಗ್ ತೊಂದರೆಗಳಿಂದಾಗಿ ನಿಧನರಾದರು. 'ಬಿಹಾರದ ಕೋಕಿಲಾ' ಎಂದು ಪ್ರೀತಿಯಿಂದ ಕರೆಯಲ್ಪಡುವ ಸಿನ್ಹಾ ಅವರು ಭೋಜ್‌ಪುರಿ, ಮೈಥಿಲಿ ಮತ್ತು ಹಿಂದಿ ಸಂಗೀತಕ್ಕೆ ನೀಡಿದ ಕೊಡುಗೆಗಳಿಂದಾಗಿ ಹೆಸರುವಾಸಿಯಾಗಿದ್ದರು. ಅವರ ಭಾವಪೂರ್ಣ ಹಾಡುಗಳು ಭಾರತೀಯ ಹಬ್ಬಾಚರಣೆ ಮತ್ತು ಸಾಂಸ್ಕೃತಿಕ ಆಚರಣೆಗಳ ಪ್ರಮುಖ ಅಂಶವಾಗಿ ಉಳಿದುಕೊಂಡಿದೆ.
ರೋಹಿತ್ ಬಲ್ (ನವೆಂಬರ್ 1, ಹೃದಯಾಘಾತ): ಪ್ರಸಿದ್ಧ ಫ್ಯಾಷನ್ ಡಿಸೈನರ್ ರೋಹಿತ್ ಬಲ್ ಅವರು ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಫ್ಯಾಷನ್ ಉದ್ಯಮದಲ್ಲಿ ಹೆಸರು ಮಾಡಿದ್ದ ಇವರು ಹಾಲಿವುಡ್ ತಾರೆಯರಾದ ಉಮಾ ಥರ್ಮನ್, ನವೋಮಿ ಕ್ಯಾಂಪ್‌ಬೆಲ್ ಮತ್ತು ಬಾಲಿವುಡ್ ಐಕಾನ್ ದೀಪಿಕಾ ಪಡುಕೋಣೆ ಅಂಂತಹ ಗಣ್ಯರ ಡ್ರೆಸ್ಸಿಂಗ್‌ಗೆ ಹೆಸರುವಾಸಿಯಾಗಿದ್ದರು. ಹೃದಯಾಘಾತದಿಂದ ಅವರ ಹಠಾತ್ ನಿಧನವು ಫ್ಯಾಷನ್ ಜಗತ್ತಿಗೆ ಶಾಕ್ ನೀಡಿತ್ತು.
ಅತುಲ್ ಪರ್ಚುರೆ (ಅಕ್ಟೋಬರ್ 14, ಕ್ಯಾನ್ಸರ್): ದಿ ಕಪಿಲ್ ಶರ್ಮಾ ಶೋ ಮತ್ತು ಬಡಿ ದೂರ್ ಸೆ ಆಯೆ ಹೈನಂತಹ ಶೋಗಳಲ್ಲಿ ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾದ ನಟ ಅತುಲ್ ಪರ್ಚುರೆ ಅವರು ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು ನಗು ಮತ್ತು ಸಂತೋಷದ ಪರಂಪರೆಯನ್ನು ಬಿಟ್ಟು ಹೊರಟರು. ಭಾರತೀಯ ದೂರದರ್ಶನಕ್ಕೆ ನೀಡಿರುವ ಅವರ ಕೊಡುಗೆ ಸದಾ ಸ್ಮರಣೆಯಲ್ಲಿರುತ್ತದೆ.
ವಿಕಾಸ್ ಸೇಥಿ (ಸೆಪ್ಟೆಂಬರ್ 8, ಹೃದಯ ಸ್ತಂಭನ): ಕಿರುತೆರೆ ನಟ ವಿಕಾಸ್ ಸೇಥಿ ಅವರು ಕಸೌತಿ ಜಿಂದಗಿ ಕೇ ಯಲ್ಲಿನ ಪಾತ್ರಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಹೃದಯಸ್ತಂಭನದಿಂದಾಗಿ ತಮ್ಮ 48ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ: ಮಿಲನಾ, ಹರ್ಷಿಕಾ, ಪ್ರಣಿತಾ TO ಅನುಷ್ಕಾ ಕೊಹ್ಲಿ, ದೀಪಿಕಾ ಪಡುಕೋಣೆ: 2024ರಲ್ಲಿ ಪೋಷಕರಾದ ಸೆಲೆಬ್ರಿಟಿ ಕಪಲ್ಸ್
ಉಸ್ತಾದ್ ರಾಶಿದ್ ಖಾನ್ (ಜನವರಿ 9, ಪ್ರೊಸ್ಟೇಟ್ ಕ್ಯಾನ್ಸರ್): ಖ್ಯಾತ ಶಾಸ್ತ್ರೀಯ ಗಾಯಕ ಉಸ್ತಾದ್ ರಾಶಿದ್ ಖಾನ್ ಅವರು ತಮ್ಮ 55ನೇ ವಯಸ್ಸಿನಲ್ಲಿ ನಿಧನರಾದರು. ಕ್ಯಾನ್ಸರ್‌ಗೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಹಲೋಕ ತ್ಯಜಿಸಿದರು.
ಇದನ್ನೂ ಓದಿ: ಅಮಿತಾಭ್, ಶಾರುಖ್ To ದೀಪಿಕಾ: ನಯಾ ಪೈಸೆ ಪಡೆಯದೇ ನಟಿಸಿದ ಸೂಪರ್ ಸ್ಟಾರ್ಗಳಿವರು
ಅವರು ಬಿಟ್ಟುಹೋಗಿರುವ ಪರಂಪರೆಯನ್ನು ಗೌರವಿಸುವ ಕ್ಷಣ. ಆಯಾ ಕ್ಷೇತ್ರಗಳಿಗೆ ನೀಡಿರುವ ಅವರ ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ. ಅವರ ಆತ್ಮಕ್ಕೆ ಶಾಂತಿ ಕೋರೋಣ..
ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್ವುಡ್ ಸೂಪರ್ಸ್ಟಾರ್ಗಳಿವರು