ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2: ದಿ ರೂಲ್'. ಈ ಹಿಂದೆ ಗ್ಲಿಂಪ್ಸ್‌ವೊಂದು ಬಿಡುಗಡೆಯಾಗಿ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿತ್ತು. ಸರಿಸುಮಾರು ಒಂದು ವರ್ಷದ ನಂತರ, ಚಿತ್ರತಂಡ ಅಪ್ಡೇಟ್ಸ್ ಹಂಚಿಕೊಂಡಿದೆ. ಇದೇ ಏಪ್ರಿಲ್ 8ಕ್ಕೆ ಟೀಸರ್ ರಿಲೀಸ್ ಆಗಲಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸೀಕ್ವೆಲ್‌ನಿಂದ ಅಪ್ಡೇಟ್ಸ್ ಕೊಡಲಾಗಿದೆ. ದಕ್ಷಿಣ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರದ ಅಪ್ಡೇಟ್ಸ್ ಅನ್ನು ತನ್ನ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿದೆ. ಸುಕುಮಾರ್ ಸಾರಥ್ಯದ ಸಿನಿಮಾ, 2021ರಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಕಂಡ ''ಪುಷ್ಪ: ದಿ ರೈಸ್''ನ ಮುಂದುವರಿದ ಭಾಗ.
ಸೋಮವಾರದಂದು ಚಿತ್ರ ತಯಾರಕರು ಏಪ್ರಿಲ್ 2ರಂದು ಪುಷ್ಪ ಸೀಕ್ವೆಲ್ನ ಅಪ್ಡೇಟ್ಸ್ ನೀಡುತ್ತೇವೆಂದು ಭರವಸೆ ಕೊಟ್ಟಿದ್ದರು. ಮಂಗಳವಾರದಿಂದ ಪುಷ್ಪ ಮಾಸ್ ಜಾತ್ರಾ ಆರಂಭವಾಗಲಿದೆ ಎಂದು ತಿಳಿಸಿದ್ದರು. ಏಪ್ರಿಲ್ 8 ನಾಯಕ ನಟ ಹಾಗೂ ಏಪ್ರಿಲ್ 5 ನಾಯಕ ನಟಿಯ ಜನ್ಮದಿನವಾದ ಹಿನ್ನೆಲೆಯಲ್ಲಿ ಚಿತ್ರದಿಂದ ಪೋಸ್ಟರ್, ಗ್ಲಿಂಪ್ಸ್, ಟೀಸರ್ ರಿಲೀಸ್ ಆಗಬಹುದೆಂದು ಅಭಿಮಾನಿಗಳು ಊಹಿಸಿದ್ದರು. ಈ ಊಹೆ ನಿಜವಾಗಿದೆ. ಇಂದು ಚಿತ್ರತಂಡ ಅಪ್ಡೇಟ್ ಕೊಟ್ಟಿದೆ.
ಮೈತ್ರಿ ಮೂವಿ ಮೇಕರ್ಸ್ ಶೇರ್ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ, ಬರುವ ಸೋಮವಾರ (ಏಪ್ರಿಲ್ 8) ಅಂದರೆ ಅಲ್ಲು ಅರ್ಜುನ್ ಜನ್ಮದಿನದಂದು ಟೀಸರ್ ಅನಾವರಣಗೊಳಿಸುವುದಾಗಿ ತಿಳಿಸಿದೆ. ಅಲ್ಲದೇ, ಗೆಜ್ಜೆ ತೊಟ್ಟ ಅಲ್ಲು ಅರ್ಜುನ್ ಅವರ ಕಾಲಿನ ಫೋಟೋವುಳ್ಳ ಪೋಸ್ಟರ್ ಅನ್ನೂ ಚಿತ್ರತಂಡ ರಿಲೀಸ್ ಮಾಡಿದೆ.